ಜಿಲ್ಲೆ

ಪ್ರಜಾಪ್ರಭುತ್ವ ಉಳಿವಿಗೆ ಯೋಗ್ಯರಿಗೆ ಮತದಾನ ಮಾಡಿ

ಚಾಮರಾಜನಗರ: ಸಮಾಜದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ, ಆಸೆ-ಆಮಿಷಗಳಿಗೆ ಬಲಿಯಾಗುತ್ತಿರುವ ರಾಜಕಾರಣಿಗಳಿಂದ ಸದೃಢ ಪ್ರಜಾಪ್ರಭುತ್ವ ನಿರ್ಮಾಣ ಸಾಧ್ಯವೇ ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ಜನಪ್ರತಿನಿಧಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬೆರಗು ಮೂಡಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ 2023-24ನೇ ಸಾಲಿನ ಮತದಾರ ಸಾಕ್ಷರತೆ ಸಂಘ, ಇಎಲ್ಸಿ ವತಿಯಿಂದ ಸೋಮವಾರ ಆಯೋಜಿಸಿದ್ದ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಪ್ರಜಾಪ್ರಭುತ್ವದ ಉಳಿವಿಗೆ ರಾಜಕಾರಣಿಗಳ ಪಾಲುದಾರಿಕೆ ಏನು? ಆಸೆ-ಆಮಿಷಗಳಿಗೆ ಬಲಿಯಾಗುತ್ತಿರುವ ರಾಜಕಾರಣಿಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವೇ? ಭ್ರಷ್ಟಚಾರ ತಡೆಗಟ್ಟುವಲ್ಲಿ ರಾಜಕಾರಣಿಗಳ ಕರ್ತವ್ಯವೇನು ಎಂಬ ಪ್ರಶ್ನೆಗಳನ್ನು ಕೇಳಿದರು.

ನಗರಸಭಾ ಸದಸ್ಯ ಮಹೇಶ್ ಗಾಳೀಪುರ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ಸರ್ಕಾರ ಮತದಾರರ ಸಾಕ್ಷರತಾ ಸಂಘ, ಚುನಾವಣಾ ಪಾಠಶಾಲೆ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಸಂವಿಧಾನದ ಮೂಲಕ ಎಲ್ಲರಿಗೂ ಮತದಾನ ಎಂಬ ದೊಡ್ಡ ಅಸ್ತ್ರ ಕೊಟ್ಟಿದ್ದಾರೆ. ಚುನಾವಣೆಗಳಲ್ಲಿ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಸಮಾಜದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ. ಹಲವು ಜನರು ಆಸೆ-ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡುತ್ತಾರೆ. ಇದರಿಂದ ರಾಜಕಾರಣಿಗಳು ಕೂಡ ಮಾರಾಟವಾಗುತ್ತಾರೆ. ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಂಡರೆ, ಸೂಕ್ತವಾದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಇದೆಲ್ಲವೂ ಸರಿಯಾಗುತ್ತದೆ ಎಂದರು.

ವಿದ್ಯಾರ್ಥಿಗಳು ಮಾತನಾಡಿ, ನಿಮ್ಮ ರಾಜಕೀಯ ಜೀವನದಲ್ಲಿ ತೃಪ್ತಿ ಇದೆಯೇ? ನೀವು ಅಂದುಕೊಂಡಿರುವ ಗುರಿ ಈಡೇರಿದೆಯೇ? ಸಮಾಜದಲ್ಲಿರುವ ದುರ್ಬಲ ವರ್ಗದವರನ್ನು ಮೇಲೆತ್ತುವಲ್ಲಿ ರಾಜಕಾರಣಿಗಳ ಪಾತ್ರವೇನು ಎಂದು ಪ್ರಶ್ನಿಸಿದರು. ನಾನು ನಗರಸಭಾ ಸದಸ್ಯನಾಗುತ್ತೇನೆಂದು ಭಾವಿಸಿರಲಿಲ್ಲ. ಆದರೆ ನಾನು ರಾಜಕಾರಣಿಯಾಗಿ ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆ. ದುರ್ಬಲ ವರ್ಗದವರನ್ನು ಮೇಲೆತ್ತಲು ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಅದನ್ನು ಜನರಿಗೆ ಸೂಕ್ತ ರೀತಿಯಲ್ಲಿ ತಲುಪಿಸುವಂತಹ ಕೆಲಸವನ್ನು ರಾಜಕಾರಣಿಗಳು ಮಾಡಬೇಕು. ನನ್ನ ವ್ಯಾಪ್ತಿಯಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಧೈರ್ಯವಾಗಿ ಹೇಳಬಲ್ಲೆ. ಮುಂದಿನ ದಿನಗಳಲ್ಲಿ ನಗರಸಭಾ ಅಧ್ಯಕ್ಷನಾಗಬೇಕು. ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಗುರಿ ಇಟ್ಟುಕೊಂಡಿದ್ದೇನೆ. ನಮ್ಮ ನಡೆಯಲ್ಲಿ ಪ್ರಾಮಾಣಿಕತೆ ಹಾಗೂ ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಮತದಾನದ ಮೌಲ್ಯವನ್ನು ಅರಿತು, ಮತವನ್ನು ದುರುಪಯೋಗ ಮಾಡದೆ, ಮಾರಾಟ ಮಾಡಿಕೊಳ್ಳದೆ ಇದ್ದರೆ ಸದೃಢವಾದ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ನಿರ್ಮಲಾ, ಹಿರಿಯ ಉಪನ್ಯಾಸಕ ನಾಗಯ್ಯ, ನರಸಿಂಹಯ್ಯ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.