ಜಿಲ್ಲೆ

ಭಾಷಾ ಸಂಪತ್ತು ವೃದ್ಧಿಸುವ ಪದಬಂಧ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಬುದ್ಧಿಶಕ್ತಿಗೆ ಸವಾಲು ಹಾಕುವ ಪದಬಂಧ ಭಾಷಾ ಸಂಪತ್ತನ್ನು ಸಮೃದ್ಧಗೊಳಿಸುತ್ತದೆ. ಪ್ರಶ್ನೆಗಳನ್ನು ಓದಿ ಖಾಲಿ ಚೌಕದಲ್ಲಿ ಪದ ತುಂಬುವುದು ಕೇವಲ ಆಟವಲ್ಲದೆ, ಆಲೋಚನಾ ಶಕ್ತಿ ವೃದ್ಧಿಸುವ ಮಾಧ್ಯಮ ಎನ್ನುವುದು ವಿದ್ಯಾರ್ಥಿಗಳಿಗೆ ಮನದಟ್ಟಾಯಿತು.
77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಚಾನೆಲ್ ವತಿಯಿಂದ ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ಸಹಯೋಗದಲ್ಲಿ ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಪದಬಂಧ ಸ್ಪರ್ಧೆ ವಿದ್ಯಾರ್ಥಿಗಳಿಗೆ ಹೊಸ ಅನುಭವ ತಂದುಕೊಟ್ಟಿತು.ಬೆಳಗ್ಗೆ 11 ಗಂಟೆಗೆ ಶುರುವಾದ ಪದಬಂಧ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. 30 ನಿಮಿಷಗಳ ಕಾಲಾವಕಾಶದ ಬಳಿಕ ಸ್ಪರ್ಧೆ ಮುಕ್ತಾಯಗೊಂಡಿತು. ಕನ್ನಡ ವಿಭಾಗದ ಅಧ್ಯಾಪಕರಾದ ಡಾ.ಮಹೇಶ್‌ಬಾಬು, ಡಾ.ಶಿವರಾಜು, ಡಾ.ಮಹೇಶ್ ಪದಬಂಧದ ಉತ್ತರ ಪತ್ರಿಕೆಯ ಮೌಲ್ಯಮಾಪನ ಮಾಡಿದರು.

ಬುದ್ಧಿ ಚುರುಕುಗೊಳಿಸುವ ಚಟುವಟಿಕೆ:
ಪದಬಂಧ ಮನುಷ್ಯನ ಬುದ್ಧಿಯನ್ನು ಚುರುಕುಗೊಳಿಸುತ್ತದೆ. ವಿದ್ಯಾರ್ಥಿಗಳಲ್ಲಿ ಹೊಸತನದ ಕಲಿಕೆಗೆ ನೆರವಾಗುತ್ತದೆ ಎಂದು ಪ್ರಗತಿಪರ ಹೋರಾಟಗಾರ ವೆಂಕಟರಮಣಸ್ವಾಮಿ(ಪಾಪು) ಅಭಿಪ್ರಾಯಪಟ್ಟರು.
ಚಾಮರಾಜನಗರ ವಿಶ್ವವಿದ್ಯಾಲಯದ ನಿಜಗುಣ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪದಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಾಮರಾಜನಗರ ವಿಶ್ವವಿದ್ಯಾಲಯ ಉತ್ತಮ ಪರಿಸರದಲ್ಲಿದೆ. ಇಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ತರಲು ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಯೋಜನೆಗಳನ್ನು ರೂಪಿಸಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆ.20ರಂದು ಚಾಮರಾಜನಗರಕ್ಕೆ ಆಗಮಿಸುತ್ತಿದ್ದಾರೆ. ಆ ಸಂದರ್ಭ ಅವರನ್ನು ಭೇಟಿ ಮಾಡಿ ಚಾಮರಾಜನಗರ ವಿವಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಕೋರುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ಇದ್ದು, ಅವರ ಅವಧಿಯಲ್ಲಿ ಚಾಮರಾಜನಗರ ಪ್ರಗತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ಚಾಮರಾಜನಗರಕ್ಕೆ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ಆದರೆ, ಇಲ್ಲಿನ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ನಗರದ ಮಕ್ಕಳಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.
ಪತ್ರಿಕಾರಂಗ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಿದೆ. ದಿನಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನ ಮಾತ್ರ ವೃದ್ಧಿಸುವುದಿಲ್ಲ, ಜತೆಗೆ ಹೊಸ ಪದಗಳ ಪರಿಚಯವಾಗುತ್ತದೆ. ಬರವಣಿಗೆಯಲ್ಲಿ ಕ್ರಿಯಾಶೀಲತೆ ಸೃಜಿಸುತ್ತದೆ. ಪ್ರಬಂಧ ಬರೆಯಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು. ‘ವಿಜಯವಾಣಿ’ ಪತ್ರಿಕೆಯ ಬದನಗುಪ್ಪೆ ಪ್ರತಿನಿಧಿ ಮಲ್ಲಣ್ಣ, ತೇಜಸ್ ಸೇವಾ ಸಂಸ್ಥೆಯ ಅಧ್ಯಕ್ಷ ರವಿತೇಜ್ ಇತರರು ಇದ್ದರು.

ಜ್ಞಾನ ವಿಕಾಸದ ಮಾರ್ಗ: ಪದಬಂಧ ತಾರ್ಕಿಕ ಆಲೋಚನೆ, ಜ್ಞಾನಾತ್ಮಕ ವಿಕಾಸದ ಮಾರ್ಗ. ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ಓದುವ ಮಟ್ಟಕ್ಕೆ ಬೆಳೆದ ಮೇಲೆ ಇನ್ನೂ ಹೆಚ್ಚು ಅಧ್ಯಯನಶೀಲರಾಗಬೇಕು ಎಂದು ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಎಂ.ಎಸ್.ಬಸವಣ್ಣ ಸಲಹೆ ನೀಡಿದರು. ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಸಂಶೋಧನಾತ್ಮಕ ಬರವಣಿಗೆಗೆ ಪ್ರೋತ್ಸಾಹ ನೀಡುತ್ತಾರೆ. ಇಂತಹ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಿರುವುದಕ್ಕೆ ಇದೇ ಕಾರಣ ಎಂದು ಹೇಳಿದರು.

ಶ್ಲಾಘನೀಯ ಕಾರ್ಯ:
ಜಿಲ್ಲೆಯಲ್ಲಿ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಹೆಸರಿನಲ್ಲಿ ವೇದಿಕೆ ಸ್ಥಾಪಿಸಿ ಸಮಾಜ ಸೇವೆ ಮಾಡುತ್ತಿರುವ ಎಸ್.ಸುರೇಶ್ ಮತ್ತು ತಂಡ ಪದಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ತಲಾ 1 ಸಾವಿರ ರೂ. ನಗದು ಮತ್ತು ಪ್ರಮಾಣಪತ್ರವನ್ನು ನೀಡಿತು. ಡಾ.ಎಸ್.ಪಿ.ಬಾಲಸುಬ್ರಮಣ್ಯಂ ಗಾನಗಂಧರ್ವ ಸಾಂಸ್ಕೃತಿಕ ಕಲಾ ವೇದಿಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಪದಬಂಧ ಸ್ಪರ್ಧೆಯಲ್ಲಿ ವಿವಿಯ ವಿವಿಧ ವಿಭಾಗಗಳ 52 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ವಿಜೇತರಾದ ಸಿ.ಭೈರಲಿಂಗು, ಪಿ.ಎಂ.ಮಾದಲಾಂಬಿಕಾ, ಜಿ.ಪಿ.ರಮ್ಯಾ, ಪಿ. ಮಾದಲಾಂಬಿಕಾ, ಎಚ್.ಎಸ್.ಭವ್ಯಶ್ರೀ ಅವರಿಗೆ ವೇದಿಕೆಯ ಗೌರವಾಧ್ಯಕ್ಷ ಎಸ್.ಸುರೇಶ್, ಅಧ್ಯಕ್ಷ ಎಚ್.ಎಂ.ಶಿವಣ್ಣ, ಜಂಟಿ ಕಾರ್ಯದರ್ಶಿ ಜೋಸ್ೆ, ಪ್ರಧಾನ ಕಾರ್ಯದರ್ಶಿ ರಾಜಣ್ಣ, ಸದಸ್ಯ ಬಂಗಾರು ಬಹುಮಾನ ವಿತರಣೆ ಮಾಡಿದರು.


ಪದಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ತುಂಬ ಖುಷಿಯಾಯಿತು. ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಪಾಲ್ಗೊಂಡೆ. ನಾನು ಪತ್ರಿಕೆಗಳಲ್ಲಿ ನಿರಂತರವಾಗಿ ಪದಬಂಧ ತುಂಬುತ್ತೇನೆ. ಇದು ನನಗೆ ಸ್ಪರ್ಧೆಯಲ್ಲಿ ಗೆಲ್ಲಲು ನೆರವಾಯಿತು.
ಎಚ್.ಎಸ್.ಭವ್ಯಶ್ರೀ ವಿಜೇತ ವಿದ್ಯಾರ್ಥಿನಿ, ಚಾ.ನಗರ ವಿವಿ

ಪದಬಂಧ ಸ್ಪರ್ಧೆ ಆಯೋಜನೆಯ ಯೋಚನಾ ಕ್ರಮ ಚೆನ್ನಾಗಿತ್ತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪದಬಂಧ ಎರಡಕ್ಕೂ ಸೇರುವಂತಿದೆ. ಪದಗಳನ್ನು ಹುಡುಕಿ ಸರಿ ಉತ್ತರ ಬರೆಯುವುದು ವಿಭಿನ್ನ ಅನುಭವ ನೀಡಿತು.
ಪಿ.ಎಂ.ನಾಗಲಾಂಬಿಕಾ ವಿಜೇತ ವಿದ್ಯಾರ್ಥಿ, ಚಾ.ನಗರ ವಿವಿ

ಪದಬಂಧ ಬರೆಯುವುದು ನನ್ನ ಹವ್ಯಾಸ. ಗ್ರಂಥಾಲಯಕ್ಕೆ ಹೋದಾಗಲೆಲ್ಲ ಪದಬಂಧ ಬರೆಯುತ್ತೇನೆ. ಇದನ್ನೇ ಸ್ಪರ್ಧೆ ರೀತಿ ಆಯೋಜಿಸಿದ್ದು ಆಸಕ್ತಿ ಉಂಟುಮಾಡಿತು. ಸ್ಪರ್ಧೆಯಲ್ಲಿ ಭಾಗವಹಿಸಿ ಸಂತೋಷವಾಯಿತು.
ಜಿ.ಪಿ.ರಮ್ಯಾ, ವಿಜೇತ ವಿದ್ಯಾರ್ಥಿನಿ, ಚಾ.ನಗರ ವಿವಿ

ಪದಬಂಧ ಸ್ಪರ್ಧೆ ಹಮ್ಮಿಕೊಂಡು ಪ್ರೋತ್ಸಾಹ ನೀಡಿದ ಕ್ರಮ ಚೆನ್ನಾಗಿತ್ತು. ನಾನು ಶಾಲಾ ಹಂತದಿಂದಲೂ ಪದಬಂಧ ತುಂಬುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದೇನೆ. ಇಂತಹ ಸ್ಪರ್ಧೆ ಹೊಸ ಅನುಭವ ನೀಡಿತು.
ಪಿ.ಮಾದಲಾಂಬಿಕಾ ವಿಜೇತ ವಿದ್ಯಾರ್ಥಿನಿ, ಚಾ.ನಗರ ವಿವಿ

ಸ್ಪರ್ಧೆ ಚೆನ್ನಾಗಿತ್ತು. ಇದೊಂದು ಒಳ್ಳೆಯ ಅವಕಾಶ. ನಮ್ಮ ಕಾಲೇಜಿನಲ್ಲಿ ಪದಬಂಧ ಸ್ಪರ್ಧೆ ಆಯೋಜನೆ ಮಾಡಿದ್ದಕ್ಕೆ ತುಂಬ ಖುಷಿಯಾಯಿತು. ಆಯೋಜಕರು ಮತ್ತು ಪ್ರಾಧ್ಯಾಪಕರಿಗೆ ಧನ್ಯವಾದ.
ಸಿ.ಭೈರಲಿಂಗು ವಿಜೇತ ವಿದ್ಯಾರ್ಥಿ, ಚಾ.ನಗರ ವಿವಿ