ಜಿಲ್ಲೆ

ಪ್ರಕೃತಿ ಮುನಿದರೆ ಭೂಮಿ ಬುಡಮೇಲು

ಚಾಮರಾಜನಗರ: ಮನುಷ್ಯನ ದುರಾಸೆಗೆ ಪರಿಸರ ಸದ್ದಿಲ್ಲದೆ ಮಾಯಾವಾಗುತ್ತಿದೆ ಎನ್ನುವ ಮಕ್ಕಳ ಕಲ್ಪನೆ ಬಿಳಿಯ ಹಾಳೆಯಲ್ಲಿ ಬಣ್ಣವಾದರೆ, ಪರಿಸರ ಮುನಿದರೆ ಇಡೀ ಭೂ ಮಂಡಲವೇ ಬುಡಮೇಲಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶ ಕಾರ್ಯಕ್ರಮದಲ್ಲಿ ಹೊರಹೊಮ್ಮಿತು.

ನಗರದ ಎಂವೈಎ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗೂ ತೇಜಸ್ ಸೇವಾ ಸಂಸ್ಥೆ, ಪವನ್ ಸೇವಾ ಟ್ರಸ್ಟ್ ಹಾಗೂ ಐಸೆಟ್ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಜನಸಂಖ್ಯೆ ಹೆಚ್ಚಳದಿಂದ ನಾಶವಾಗುತ್ತಿರುವ ಪರಿಸರವನ್ನು, ಮನುಷ್ಯ ಮನಸ್ಸು ಮಾಡಿದರೆ ಸಂರಕ್ಷಣೆ ಮಾಡುವುದು ಅತಿಶಯೋಕ್ತಿ ಅಲ್ಲ ಎಂಬುದನ್ನು ವಿಭಿನ್ನವಾಗಿ ಚಿತ್ರಿಸಿ ತೋರಿಸಿದರು.

ಇದರಿಂದ ಮಕ್ಕಳು ತಮ್ಮ ಕಲ್ಪನೆಯ ಪರಿಸರದ ಬಗ್ಗೆ ಉತ್ತಮ ಮನೋಬಲ ಹೊಂದಿದ್ದ ಸುಮಾರು 38 ವಿದ್ಯಾರ್ಥಿಗಳು ಭಾಗವಹಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಚಿತ್ರ ಬರೆದ ಮೂವರು ವಿಜೇತರಾಗಿ ಪ್ರಶಸ್ತಿ ಬಾಚಿಕೊಂಡರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಪಟ್ಟಣ ಠಾಣೆಯ ಆರಕ್ಷಕ ನಿರೀಕ್ಷಕ ರಾಜೇಶ್ ಉದ್ಘಾಟಿಸಿ ಮಾತನಾಡಿ, ಜನಪದ ಕಲೆಗಳ ತವರೂರು ಎಂದೇ ಹೆಸರುವಾಸಿಯಾಗಿರುವ ಜಿಲ್ಲೆ ಚಾಮರಾಜನಗರ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಗಗನದೆತ್ತರಕ್ಕೆ ಬೆಳೆಯುತ್ತಿರುವ ಕಟ್ಟಡಗಳ ಮುಂದೆ ಗಿಡ ಮರಗಳು ಮಾಯವಾಗುತ್ತಿವೆ. ಎಲ್ಲಿ ನೋಡಿದರೂ ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ನಿರಂತರವಾಗಿ ಕಂಡುಬರುವುದರಿಂದ ಪರಿಸರದಲ್ಲಿ ಸಾಕಷ್ಟು ಅಸಮತೋಲನ ಉಂಟಾಗುವುದಕ್ಕೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿ ದಿಸೆಯಿಂದಲೇ ಪರಿಸರವನ್ನು ಸಂರಕ್ಷಣೆ ಮಾಡುವ ಪಣ ತೊಟ್ಟರೆ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆಗೆ ಒಂದು ಉತ್ತಮವಾದ ಪರಿಸರವನ್ನು ಕೊಡಲು ಸಾಧ್ಯ. ಹಾಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪರಿಸರದ ಒಡನಾಟ ಬೆಳೆಸಿಕೊಳ್ಳಿ ಎಂದು ಕಿವಿಮಾತು ತಿಳಿಸಿದರು.

ನಗರಸಭಾ ಮಾಜಿ ಸದಸ್ಯ ಸೈಯದ್ ಇಮ್ರಾನ್ ಮಾತನಾಡಿ, ಪರಿಸರಕ್ಕೆ ಮಾರಕವಾಗುವಂತಹ ವಸ್ತುಗಳ ಬಳಕೆಯನ್ನು ಮೊದಲು ನಾವು ತ್ಯಜಿಸಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಲ್ಲಿಸುವುದರಿಂದ ಉಂಟಾಗುವ ಅನುಕೂಲ ಹಾಗೂ ಇದರಿಂದಾಗುವ ಅನನುಕೂಲದ ಬಗ್ಗೆ ಸರ್ವರಲ್ಲೂ ಜಾಗೃತಿ ಮೂಡಿಸಬೇಕು. ಮರ, ಗಿಡಗಳಿದ್ದರೆ ಮಾತ್ರ ಮಳೆ ಬರಲು ಸಾಧ್ಯ, ಮಳೆಯಾದರೆ ಮಾತ್ರ ಜೀವನ ನಿರ್ವಹಣೆ ಸಾಧ್ಯ, ಮಳೆ ಬೆಳೆ ಏನೂ ಇಲ್ಲ ಅಂದರೆ ಮನುಷ್ಯನ ಜೀವನ ಅಸಾಧ್ಯ. ಹಾಗಾಗಿ ಇಂದೇ ನಿಮ್ಮ ನಿಮ್ಮ ಮನೆಯ ಮುಂದೆ ಒಂದೋಂದು ಗಿಡಗಳನ್ನು ನೆಡುವ ಸಂಕಲ್ಪ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಶಾಲಾ ಆಡಳಿತಾಧಿಕಾರಿ ಮಹಮ್ಮದ್ ಸಾಬಿರ್, ರಾಜೀವ್‌ಗಾಂಧಿ ವಿಚಾರ ಮಂಚ್ ಜಿಲ್ಲಾ ಉಪಾಧ್ಯಕ್ಷ ಸೈಯದ್ ಇಸ್ಮಾಯಿಲ್, ಗುತ್ತಿಗೆದಾರ ಮಹಮ್ಮದ್ ಸುಹೇಲ್, ಚಿತ್ರಕಲಾವಿದರಾದ ಸ್ಫೂರ್ತಿ ಮಹೇಶ್, ಸ್ಪಾಟ್ ಹರೀಶ್, ಕಲಾವಿದ ಅನಿಲ್, ನಾಗವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಶಾಂತ್ ನಾಗವಳ್ಳಿ, ಪವನ್ ಸೇವಾ ಟ್ರಸ್ಟ್ ಅಧ್ಯಕ್ಷ ಸಿಎನ್ ಸಂಪತ್ ಕುಮಾರ್, ತೇಜಸ್ ಸೇವಾ ಸಂಸ್ಥೆಯ ಅಧ್ಯಕ್ಷ ರವಿತೇಜ್ ಉಪಸ್ಥಿತರಿದ್ದರು.

ಚಿತ್ರ ಕಲಾ ಸ್ಪರ್ಧೆಗೆ ಮೆಚ್ಚುಗೆ
ಬಹುಮಾನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂವೈಎ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಆಡಳಿತಾಧಿಕಾರಿ ಮಹಮ್ಮದ್ ಸಾಬಿರ್ ಮಾತನಾಡಿ, ಪರಿಸರ ಸಂರಕ್ಷಣೆ ಮಾಡುವಲ್ಲಿ ಹಲವಾರು ವರ್ಷಗಳಿಂದ ನಮ್ಮ ಶಾಲೆ ಬಹಳ ಮುಂಚೂಣಿಯಲ್ಲಿದೆ. ಮಕ್ಕಳಲ್ಲಿ ಪ್ಲಾಸ್ಟಿಕ್ ನಿಷೇಧಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ವಿಜಯವಾಣಿ ದಿನಪತ್ರಿಕೆಯ ಕಾರ್ಯ ಶ್ಲಾಘನೀಯವಾಗಿದೆ. ಪ್ರೌಢಾವಸ್ಥೆಯ ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ಚಿತ್ರಕಲೆಯ ಮೂಲಕ ಸ್ಪರ್ಧಾ ಮನೋಭಾವ ಬೆಳೆಸುತ್ತಿರುವ ಪತ್ರಿಕೆಯ ಹೆಜ್ಜೆ ಉತ್ತಮವಾದುದ್ದಾಗಿದೆ ಎಂದು ತಿಳಿಸಿದರು.
ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ, ಪರಿಸರ ಸಂರಕ್ಷಣೆಗೆ ನಾವೆಲ್ಲರೂ ಶ್ರಮಿಸೋಣ ಎಂದು ಭರವಸೆ ನೀಡಿದರು.

ಮನಸೂರೆಗೊಳಿಸಿದ ಪ್ರಾತ್ಯಕ್ಷಿಕೆ
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪ್ರಕೃತಿ ಸೌಂದರ್ಯವನ್ನು ಬಣ್ಣವಾಗಿ ಬಣ್ಣವಾಗಿ ಚಿತ್ರಿಸುವ ಮೂಲಕ ಚಿತ್ರಕಲಾವಿದ ಸ್ಪಾಟ್ ಹರೀಶ್‌ಎಲ್ಲರ ಗಮನ ಸೆಳೆದರು. ಕೇವಲ 10 ನಿಮಿಷಗಳಲ್ಲಿ ಪರಿಸರದಲ್ಲಿಯ ಸುಂದರ ವಾತಾವರಣವನ್ನು ಸೃಷ್ಟಿಸಿದ ಕೈ ಚಳಕಕ್ಕೆ ಮೆಚ್ಚುಗೆ ವ್ಯಕ್ತವಾಯಿತು.

ವಿಜೇತ ವಿದ್ಯಾರ್ಥಿಗಳು: ಚಿತ್ರಕಲಾ ಸ್ಪರ್ಧೆಯಲ್ಲಿ 38 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಉತ್ತಮವಾಗಿ ಚಿತ್ರಬಿಡಿಸಿದ ಒಂಬತ್ತನೇ ತರಗತಿಯ ಅರ್ಬಿಯಾ ಪ್ರಥಮ ಬಹುಮಾನ, ಎಂಟನೇ ತರಗತಿಯ ಬೀಬಿ ಹಜೀರಾ ದ್ವಿತೀಯ ಬಹುಮಾನ ಹಾಗೂ ಹತ್ತನೇ ತರಗತಿಯ ಹಲೀಮಾ ಸಾದಿಯಾ ತೃತೀಯ ಬಹುಮಾನ ಪಡೆದುಕೊಂಡರು.

ಚಿತ್ರಕಲೆಯನ್ನು ಜೀವಿಸಬೇಕು: ಚಿತ್ರಕಲಾವಿದ ಆರ್ಟಿಸ್ಟ್ ಅನಿ ಮಾತನಾಡಿ, ಚಿತ್ರಕಲೆ ಕೇವಲ ಸ್ಪರ್ಧೆಗಾಗಿ ಮೀಸಲಾಗಬಾರದು, ಜೀವನದ ಸ್ವರೂಪವನ್ನೇ ಬದಲಾಯಿಸುವ ಶಕ್ತಿ ಇರುವಂತಹ ಸಾಧನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಚಿತ್ರಕಲೆಯ ಸಸಿ ನೆಟ್ಟರೆ ಮುಂದೆ ಅದು ಹೆಮ್ಮರವಾಗಿ ಬೆಳೆದು ಹತ್ತಾರೂ ಜನರಿಗೆ ಅದು ಆಶ್ರಯವಾಗುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಚಿತ್ರಕಲೆಯನ್ನು ಜೀವಿಸಬೇಕು ಎಂದು ತಿಳಿಸಿದರು