ಜಿಲ್ಲೆ

16ರಂದು ಮಾರೀಕಾಡು ನಾಟಕ ಪ್ರದರ್ಶನ

reportermys

ಚಾಮರಾಜನಗರ: ಶಾಂತಲಾ ಕಲಾವಿದರು ಹಾಗೂ ಸ್ಟಾರ್ ಕ್ರಿಕೆಟರ್ ವಾರ್ಷಿಕೋತ್ಸವದ ಅಂಗವಾಗಿ ಏ.16ರಂದು ಮಾರೀಕಾಡು ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ಕೆ.ವೆಂಕಟರಾಜು ತಿಳಿಸಿದರು.


ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬೆಂಗಳೂರಿನ ’ವಾಸ್ಫ್ ಥಿಯೇಟರ್’ ತಂಡದಿಂದ ಏ.16 ಭಾನುವಾರ ಸಂಜೆ 6.30ಕ್ಕೆ ಚಂದ್ರಶೇಖರ ಕಂಬಾರ ರಚಿಸಿರುವ ಮಾರೀಕಾಡು ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಈ ನಾಟಕ ತಂಡದಲ್ಲಿ 36 ಜನ ನಟರು ಸೇರಿ 50 ಮಂದಿ ಇದ್ದಾರೆ. ಈ ನಾಟಕ ಷೇಕ್‌ಸ್ಪಿಯರ್ ರಚನೆಯ ಪ್ರಸಿದ್ಧ ’ಮ್ಯಾಕ್‌ಬೆತ್’ ನಾಟಕದ ರೂಪಾಂತರವಾಗಿದೆ. ನೀನಾಸಂ ಪದವೀಧರ ಜೋಸೆಫ್ ಜಾನ್ ನಾಟಕವನ್ನು ನಿರ್ದೇಶಿಸಿ, ಸಂಗೀತವನ್ನು ನೀಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿರುವ ನಾಟಕ ಪ್ರದರ್ಶನವನ್ನು ಸಾಹಿತಿ ಹಾಗೂ ಕಿರುತೆರೆ ನಟ ಕೆ.ಶ್ರೀನಾಥ್ ಉದ್ಘಾಟಿಸಲಿದ್ದಾರೆ. ಅಬ್ರಹಾಂ ಡಿ ಸಿಲ್ವಾ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಟಾರ್ ಕ್ರಿಕೆಟರ್ಸ್ ಕಾರ್ಯದರ್ಶಿ ಬ್ರಿಜೇಶ್ ಒಲಿವೇರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದಲ್ಲದೇ ಮೇ 2 ರಂದು ಮೈಸೂರಿನ ಎಸ್.ಬಿ.ಆರ್. ಮಹಾಜನ ಕಾಲೇಜಿನ ರಂಗತಂಡದಿಂದ ‘ಮಿಡ್ಲ್ ಕ್ಲಾಸ್ ಸಂಸಾರ’ ಹಾಸ್ಯ ನಾಟಕವನ್ನು ಪ್ರಾಯೋಜಿಸುತ್ತಿದ್ದೇವೆ ಎಂದು ತಿಳಿಸಿದರು.
ಸ್ಟಾರ್ ಕ್ರಿಕೆಟರ್ಸ್ ಕಾರ್ಯದರ್ಶಿ ಬ್ರಿಜೇಶ್ ಒಲಿವೇರಾ ಮಾತನಾಡಿ, ಏ.17 ರಿಂದ ಒಂದು ತಿಂಗಳವರೆಗೆ ಪ್ರತಿಭೆಗಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಹೊಸ ಪ್ರತಿಭೆಗಳ ಶೋಧಕ್ಕಾಗಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಂತಲಾ ಕಲಾವಿದರಾದ ಅಬ್ರಹಾಂ ಡಿ ಸಿಲ್ವಾ, ಶಂಕರ್, ವಿನಯ್ ಹಾಜರಿದ್ದರು.