ಜಿಲ್ಲೆ

ಹಾಡುಗಳಿಂದ ಕ್ರಾಂತಿಯ ಕಿಡಿ ಹೊತ್ತಿಸಿದ ಗದ್ದರ್

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಹಾಡುಗಳ ಮೂಲಕ ಹೋರಾಟವನ್ನು ಹುಟ್ಟುಹಾಕಿದ ಗದ್ದರ್ ಕೇವಲ ಹೆಸರಲ್ಲ ಕ್ರಾಂತಿಯ ಕಿಡಿ ಎಂದು ಪ್ರಗತಿ ಪರ ಸಂಘಟನೆಗಳ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಬಣ್ಣಿಸಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಮತ್ತು ಪ್ರಗತಿ ಪರ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾಂತ್ರಿಕಾರಿ ಕವಿ, ಗಾಯಕ, ಹೋರಾಟಗಾರ ಗುಮ್ಮಡಿ ವಿಠಲರಾವ್ ಗದ್ದರ್ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

70-80ರ ದಶಕದಲ್ಲಿ ಅವಿಭಜಿತ ಆಂಧ್ರಪ್ರದೇಶದಲ್ಲಿ ಶೋಷಿತರು, ಬಡವರ ಪರವಾಗಿ ಗದ್ದರ್ ಹೋರಾಟ ಮಾಡಿದರು. ಆಗ ಬಂಡವಾಳಶಾಹಿ ವ್ಯವಸ್ಥೆ ಬಹಳ ಪ್ರಬಲವಾಗಿತ್ತು. ಅದರಲ್ಲೂ ಭೂ ಮಾಲೀಕರು ಕೂಲಿಕಾರರನ್ನು ಜೀತಕ್ಕೆ ಇರಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಮಾವೋವಾದಿ ಗದ್ದರ್ ಹೋರಾಟಕ್ಕಿಳಿದರು. ನಂತರದ ದಿನಗಳಲ್ಲಿ ಅಂಬೇಡ್ಕರ್ ಸಿದ್ಧಾಂತ ಒಪ್ಪಿ ನಿಜವಾದ ಪ್ರಜಾಪ್ರಭುತ್ವವಾದಿಯಾದರು. ಅಂಬೇಡ್ಕರ್ ಭೇಟಿಯ ನಂತರ ರಕ್ತಕ್ರಾಂತಿಯ ಬದಲು ಸಂವಿಧಾನದ ಮೂಲಕ ದೇಶ ಬದಲಾವಣೆ ಮಾಡಬಹುದು ಎಂಬುದನ್ನು ಗದ್ದರ್ ಅರಿತರು. ಅವರು ಎಲ್ಲ ಹೋರಾಟಗಾರರಿಗೂ ಸ್ಫೂರ್ತಿ ಎಂದು ಬಣ್ಣಿಸಿದರು.

ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ ಮಾತನಾಡಿ, ಗದ್ದರ್ ಬೆಂಗಳೂರು, ಕೋಲಾರ, ರಾಯಚೂರು, ಮೈಸೂರು ಮತ್ತು ಇತರ ಜಿಲ್ಲೆಗಳಿಗೆ ಬಂದಿದ್ದರು. ಇವರ ಕ್ರಾಂತಿಕಾರಿ ಗೀತೆಗಳಿಂದ ಹಲವರು ಪ್ರೇರಣೆಯಾಗಿದ್ದರು. 1910ರಲ್ಲಿ ಪಂಜಾಬ್ನಲ್ಲಿ ಗದ್ದರ್ ಎಂಬ ಹೆಸರಿನ ಚಳವಳಿ ನಡೆಯುತ್ತದೆ. ಇದರ ಪ್ರಭಾವಕ್ಕೆ ಒಳಗಾಗಿ ಗುಮ್ಮಡಿ ವಿಠಲರಾವ್ ತಮ್ಮ ಹೆಸರನ್ನು ಗದ್ದರ್ ಎಂದು ಇಟ್ಟುಕೊಂಡರು. ತೆಲಂಗಾಣ ಪ್ರತ್ಯೇಕ ರಾಜ್ಯವಾಗಲು ಹೋರಾಟ ಮಾಡಿದರು ಎಂದು ವಿವರಿಸಿದರು.

ಕನ್ನಡ ಪರ ಹೋರಾಟಗಾರ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಸಾಮಾನ್ಯವಾಗಿ ಕವಿಗಳು ಹೋರಾಟಗಾರರಾಗುತ್ತಾರೆ. ಆದರೆ ಹೋರಾಟಗಾರರಾಗಿದ್ದ ಗದ್ದರ್ ಕವಿಯಾದರು. ತೆಲಂಗಾಣ ಪ್ರತ್ಯೇಕ ರಾಜ್ಯವಾಗಲು ಪ್ರಮುಖವಾಗಿ ಕಾರಣರಾದರು. ಇದು ಹೋರಾಟಕ್ಕೆ ಎಷ್ಟು ಶಕ್ತಿ ಇದೆ ಎಂದು ತೋರಿಸಿಕೊಟ್ಟರು ಎಂದು ಹೇಳಿದರು.

ಹಿರಿಯ ಸಾಹಿತಿ ಸೋಮಶೇಖರ ಬಿಸಲವಾಡಿ ಮಾತನಾಡಿ, ಮೈಸೂರಿನಲ್ಲಿ ಗದ್ದರ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಆ ಸಮಾರಂಭಕ್ಕೆ ಯಾರೂ ಸಹ ಹೋಗಬಾರದು ಎಂದು ಪೊಲೀಸರು ಸೂಚನೆ ನೀಡಿದ್ದರೂ ಅದನ್ನು ಧಿಕ್ಕರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಎಂದು ಸ್ಮರಿಸಿದರು.
ಗದ್ದರ್ ಅವರನ್ನು ಚಾಮರಾಜನಗರಕ್ಕೆ ಆಹ್ವಾನಿಸಿದ್ದೆ. ಅವರನ್ನು ಕೋಟಗಾನಹಳ್ಳಿ ರಾಮಯ್ಯ ಇಲ್ಲಿಗೆ ಕರೆತರುವುದಾಗಿ ತಿಳಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಗದ್ದರ್ ಕೇಂದ್ರ ಸರ್ಕಾರದ ಉದ್ಯೋಗದಲ್ಲಿದ್ದರು. ಆದರೆ ಪ್ರೇರಣಾದಾಯಿಕ ಸಂಗತಿಗಳಿಂದ ಉದ್ಯೋಗ ಬಿಟ್ಟು ಕಾಡು ಸೇರಿ ನಕ್ಸಲರಾಗಿ ಕೋವಿ ಹಿಡಿದರು. ಬಳಿಕ ಕೋವಿ ಬಿಟ್ಟು ಹೋರಾಟದ ಹಾದಿ ಹಿಡಿದರು. ಭೂ ಮಾಲೀಕರು, ಪೊಲೀಸರ ದೌರ್ಜನ್ಯ, ಜಾತೀಯತೆ ವಿರುದ್ಧ ಗೀತೆ ಹಾಡಿದರು ಎಂದು ನೆನಪು ಮಾಡಿಕೊಂಡರು.

ಕಾರ್ಯಕ್ರಮಕ್ಕೂ ಮುನ್ನ ಕಲೆ ನಟರಾಜು ಅವರು ಗದ್ದರ್ ಅವರ ಕೊನೆಯ ಕ್ರಾಂತಿಕಾರಿ ಗೀತೆಯನ್ನು ಓದಿ ಬಳಿಕ ಹಾಡಿದರು. ರೈತ ನಾಯಕ ಮಹೇಶ್ ಪ್ರಭು, ಮುಖಂಡರಾದ ಅರಕಲವಾಡಿ ನಾಗೇಂದ್ರ, ದೊಡ್ಡಿಂದುವಾಡಿ ಸಿದ್ದರಾಜು, ಮಹಮದ್ ಅಸ್ಗರ್ ಮುನ್ನ, ನಿಜಧ್ವನಿ ಗೋವಿಂದರಾಜು, ಯರಿಯೂರು ನಾಗೇಂದ್ರ ಮತ್ತು ಇತರರು ಭಾಗವಹಿಸಿದ್ದರು.