ಚಾಮರಾಜನಗರ: ತೋಟಗಾರಿಕೆ ಇಲಾಖೆಯ ವತಿಯಿಂದ 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕೃಷಿ ಹೊಂಡ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ಶೇ.50ರಷ್ಟು ಸಹಾಯಧನ ನೀಡಲಾಗುವುದು.
ಮಳೆಗಾಲದಲ್ಲಿ ಅಥವಾ ಆಯಾ ಭಾಗದಲ್ಲಿ ನೀರಿನ ಸೌಕರ್ಯ ಲಭ್ಯವಿದ್ದಲ್ಲಿ ಹೆಚ್ಚುವರಿ ನೀರನ್ನು ಸಂಗ್ರಹಣೆ ಮಾಡಿ ನಂತರ ಬೇಸಿಗೆ ಕಾಲದಲ್ಲಿ ಅಥವಾ ನೀರಿನ ಅಭಾವವಿರುವ ಸಂಧರ್ಭದಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಿನ ಸೌಕರ್ಯ ಕಲ್ಪಿಸುವುದು ಇಲಾಖೆಯ ಮುಖ್ಯ ಉದ್ದೇಶವಾಗಿದೆ.
ಇಳಿಜಾರುರಂತೆ ಕೃಷಿಹೊಂಡವನ್ನು ಕಡ್ಡಾಯವಾಗಿ ನಿರ್ಮಿಸಬೇಕು (ಕೃಷಿ ಹೊಂಡದ ನೀರು ಶೇಖರಣಾ ಸಾಮರ್ಥ್ಯ 1200 ಘ.ಮೀ. ಇರಬೇಕು). ತಳಭಾಗದಲ್ಲಿ ನೀರು ಇಂಗದಂತೆ ಕೃಷಿಹೊಂಡಕ್ಕೆ 300 ಮೈಕ್ರಾನ್ ಐಎಸ್‌ಐ ಗುಣಮಟ್ಟದ ಪಾಲೀಥೀನ್ ಹೊದಿಕೆಯನ್ನು ಇಲಾಖೆಯಿಂದ ಎಂಪೆನಲ್ ಆಗಿರುವ ಏಜೆನ್ಸಿ ರವರಿಂದಲೇ ರೈತರು ಖರೀದಿಸಿ ಅಳವಡಿಸುವುದು ಕಡ್ಡಾಯವಾಗಿದೆ. ನೀರು ಸಂಗ್ರಹಣೆ ಒಳಹರಿವಿಗಾಗಿ ಹಾಗೂ ಹೆಚ್ಚುವರಿ ನೀರನ್ನು ಹೊರಹಾಕಲು ಔಟ್‌ಲೆಟ್ ನಿರ್ಮಾಣ ಮಾಡಬೇಕಿದೆ.
ನೀರಿನ ಪ್ರಾಮುಖ್ಯತೆಯನ್ನು ಅರಿತು ಕೃಷಿ ಹೊಂಡ ನಿರ್ಮಾಣಕ್ಕೆ ಎಲ್ಲಾ ವರ್ಗದ ರೈತರಿಗೂ ಶೇ.50ರ ಸಹಾಯಧನವಾದ 75 ಸಾವಿರ ರೂ. ನೀಡಲಾಗುವುದು. ಕನಿಷ್ಟ 0.40 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು. ಆಸಕ್ತ ರೈತರು ಈ ಕೂಡಲೇ ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ ತಾಕಿನ ಪೋಟೋ, ಚೆಕ್‌ಬಂಧಿ, ಕಂದಾಯ ಇಲಾಖೆಯಿಂದ ಗಣಕೀಕೃತ ಬೆಳೆ ದೃಢೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಾಗಿದ್ದಲ್ಲಿ ಆರ್‌ಡಿ ಸಂಖ್ಯೆಯುಳ್ಳ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್, ಕೃಷಿ ಇಲಾಖೆಯಿಂದ ಎನ್.ಒ.ಸಿ ಇತ್ಯಾದಿ ದಾಖಲೆಗಳೊಂದಿಗೆ ಕೂಡಲೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.