ಚಾಮರಾಜನಗರ: ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ಕೊಡಿಸುವ ಜೊತೆಗೆ ಪೋಷಕರು ಸಹ ಪ್ರಜ್ಞಾವಂತರನ್ನಾಗಿಸುವ ಸಲುವಾಗಿ ವಿ.ಭ. ಶಾಲೆಯು ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಿಳಿಸಿದರು.
ತಾಲೂಕಿನ ಕಾಗಲವಾಡಿಯಲ್ಲಿರುವ ವಿ.ಭ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಜಸೇವಾ ಪುಟ್ಟಲಿಂಗಪ್ಪ ಸೇವಾ ಟ್ರಸ್ಟ್‌ನ ವತಿಯಿಂದ ನಡೆದ ತತ್ವದ ನಡಿಗೆ ಜ್ಞಾನದ ಕಡೆಗೆ (ಪ್ರೇರಣಾದಾಯಕ ಉಪನ್ಯಾಸ ಮಾಲಿಕೆ) ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಕಲಿಕೆಯ ಶಿಕ್ಷಣ ನೀಡಿದರೆ ಸಾಲದು ಅವರ ಸರ್ವತೋಮುಖ ಬೆಳೆವಣಿಗೆಗೆ ಸಹಕಾರಿಯಗಿರುವ ಮೌಲ್ಯಯುತ ಶಿಕ್ಷಣ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಭ ಆಂಗ್ಲ ಮಾಧ್ಯಮ ಶಾಲೆಯು ಮಕ್ಕಳಿಗೆ ಭೌತಿಕ ಶಿಕ್ಷಣವನ್ನು ನೀಡುವ ಜೊತೆಗೆ ಹಿರಿಯರ ಮತ್ತು ಪೋಷಕರ ಜ್ಞಾನವನ್ನು ವೃದ್ದಿಸುವಂತಹ ತತ್ವದ ನಡಿಗೆ ಜ್ಞಾನದ ಕಡೆಗೆ ಕಾರ್ಯಕ್ರಮ ಬಹಳ ಔಚಿತ್ಯ ಪೂರ್ಣವಾಗಿದೆ. ಇಂಥ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿರುವುದು ಹಾಗು ಕಾಗಲವಾಡಿ ಮಣ್ಣಿನ ನೆಲದಲ್ಲಿ ನಿಂತಿರುವುದು ನನ್ನ ಪುಣ್ಯ ಎಂದು ತಿಳಿಸಿದರು.
ಮೈಸೂರಿನ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕಿ ಡಾ. ಕವಿತಾ, ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ನನ್ನ ಪತಿ ಕಾಗಲವಾಡಿಯವರು ಅವರ ತಂದೆ ಮತ್ತು ತಾತ ಬಹಳ ವರ್ಷಗಳ ಹಿಂದೆಯೇ ಉದ್ಯೋಗದ ನಿಮಿತ್ತ ಕಾಗಲವಾಡಿ ಬಿಟ್ಟಿದ್ದರು. ನನ್ನ ಪತಿ ನಮ್ಮ ಊರು ಕಾಗಲವಾಡಿ ಎಂದು ಹೇಳಿದ ಮೇಲೆ ಕೆಲವು ದಿನಗಳ ಹಿಂದೆ ನಮ್ಮ ಮಕ್ಕಳನ್ನು ಕಾಗಲವಾಡಿಗೆ ಕರೆ ತಂದು ನೀವು ಈ ಊರಿನವರು ಎಂದು ಪರಿಚಯಿಸಿದೆ. ನಮ್ಮ ಹಳೆ ಮನೆ ಮತ್ತು ಕಾಗಲವಾಡಿ ಗ್ರಾಮವನ್ನು ತೋರಿಸಿದ್ದೆ. ಈಗ ವಿಭ ಶಾಲೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನನ್ನದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಜಾನಪದ ಗಾಯಕ ಮೈಸೂರಿನ ಅಮ್ಮ ರಾಮಚಂದ್ರಜೀ ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಸಮಾಜ ಸೇವಕ ದುಗ್ಗಹಟ್ಟಿ ಪಿ. ವೀರಭದ್ರಪ್ಪ ಅಧ್ಯಕ್ಷತೆ ವಹಿಸಿದ್ದರು, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ಗಣ್ಯರನ್ನು ಶಾಲು ಹೊದಿಸಿ, ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿದರು. ವಿಭ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ದುಗ್ಗಹಟ್ಟಿ ಮಲ್ಲಿಕಾರ್ಜುನಸ್ವಾಮಿ, ಮುಖ್ಯ ಶಿಕ್ಷಕ ಯಮುನಾ, ಜಿಪಂ ಮಾಜಿ ಸದಸ್ಯ ಕೆ.ಪಿ. ಸದಾಶಿವಮೂರ್ತಿ, ಯಳಂದೂರು ಬಸವರಾಜು, ಮಹೇಂದ್ರ, ಕೊಮಾರಪುರದ ರಾಜಶೇಖರ್ ಹಾಗೂ ಪೋಷಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.