ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯ ನೂತನ ನಿರ್ದೇಶಕ ಹಾಗೂ ಡೀನ್ ಆಗಿ ಡಾ.ಎಚ್.ಜಿ.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಅರವಳಿಕೆ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಎಚ್.ಜಿ.ಮಂಜುನಾಥ್ ಅವರನ್ನು ಸಿಮ್ಸ್ ಆಸ್ಪತ್ರೆಯ ನಿರ್ದೇಶಕ ಹಾಗೂ ಡೀನ್ ಆಗಿ ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಜೆ.ಕುಮಾರಸ್ವಾಮಿ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಡಾ.ಮಂಜುನಾಥ್ ಗುರುವಾರ ಸಿಮ್ಸ್‌ಗೆ ಭೇಟಿ ನೀಡಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಡೀನ್ ಆಗಿದ್ದ ಡಾ.ಸಂಜೀವ್ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಯಲಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಸಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 3 ವರ್ಷಗಳಿಂದ ಡೀನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಂಜೀವ್ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಕಾರಣಗಳಿಗೆ ಸಿಮ್ಸ್ ಸದ್ದುಮಾಡಿತ್ತು. ಹೊರಗುತ್ತಿಗೆ ನೌಕರರ ಸಂಬಳವನ್ನು ಸೂಕ್ತ ಸಮಯಕ್ಕೆ ನೀಡದ ಕಾರಣ, ಕೋವಿಡ್ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ವಾರಿಯರ್ಸ್‌ಗಳನ್ನು ಕೆಲಸದಿಂದ ಕೈಬಿಟ್ಟಕಾರಣಕ್ಕೆ ಹಲವಾರು ಪ್ರತಿಭಟನೆಗಳು ನಡೆದು, ಡೀನ್ ವರ್ಗಾವಣೆ ಮಾಡುವ ಒತ್ತಾಯ ಕೇಳಿಬಂದಿತ್ತು. ಇತ್ತೀಚೆಗೆ ಡಾ.ಸಜೀವ್ ವೈದ್ಯರ ಜತೆ ಮಾತನಾಡುತ್ತಾ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ಡಾ.ಸಂಜೀವ್ ಅವರನ್ನು ವಜಾ ಮಾಡುವಂತೆ ಆಗ್ರಹಿಸಿದ್ದರು.
ಈ ವಿಚಾರ ಸ್ಥಳೀಯ ಶಾಸಕರ ಒತ್ತಾಯದ ಮೇರೆಗೆ ಮುಖ್ಯಮಂತ್ರಿಗಳ ಮಟ್ಟಕ್ಕೆ ತಲುಪಿ ಡಾ.ಸಂಜೀವ್ ಅವರನ್ನು ಸಿಮ್ಸ್ ನಿರ್ದೇಶಕ ಸ್ಥಾನದಿಂದ ವರ್ಗಾವಣೆ ಮಾಡುವಂತೆ ಒತ್ತಡ ಹಾಕಲಾಗಿತ್ತು. ಅದರಂತೆ ಡಾ.ಸಂಜೀವ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಆ ಸ್ಥಾನಕ್ಕೆ ನಿರೀಕ್ಷೆಯಂತೆ ಡಾ.ಎಚ್.ಜಿ.ಮಂಜುನಾಥ್ ಬಂದಿದ್ದಾರೆ.
ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ, ಸಿಮ್ಸ್ ವೈದ್ಯಕೀಯ ಕಾಲೇಜು ಮತ್ತು ಬೋಧನಾ ಆಸ್ಪತ್ರೆಯಲ್ಲಿ ಇರುವ ಸಮಸ್ಯೆಗಳನ್ನು ತಿಳಿದುಕೊಳ್ಳಬೇಕಿದೆ. ನಂತರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇನೆ-ಡಾ.ಎಚ್.ಜಿ.ಮಂಜುನಾಥ್, ನಿರ್ದೇಶಕ ಹಾಗೀ ಡೀನ್, ಸಿಮ್ಸ್ ಆಸ್ಪತ್ರೆ, ಚಾಮರಾಜನಗರ.