ಚಾಮರಾಜನಗರ: ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಶ್ರಮಿಸೋಣ ಎಂದು ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಕರೆ ನೀಡಿದರು.
ನಗರದ ಕುಲುಮೆ ರಸ್ತೆಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಯೋಜಿಸಿದ್ದ ಎಸ್ಸಿ ಮೋರ್ಚಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರಮೋದಿ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಪ್ರತಿಮನೆಮನೆಗೂ ತಲುಪಿಸುವ ಕೆಲಸ ಮಾಡಬೇಕು. 2024 ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದು ಮೂರನೇ ಬಾರಿಗೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸೋಣ ಎಂದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಬಿಜೆಪಿ ಸರ್ಕಾರದ ಜನಪರ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಗಳನ್ನು ಪ್ರತಿಮನೆಮನೆಗೂ ತಿಳಿಸಿಕೊಡುವ ಪ್ರಯತ್ನ ಮಾಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಲಿತರ ಮತಗಳು ಬಿಜೆಪಿಗೆ ಹೆಚ್ಚಿನ ಮಟ್ಟದಲ್ಲಿ ಬರುವಂತೆ ಮಾಡಬೇಕು ಎಂದರು.
ಜಿಲ್ಲಾ ಎಸ್ಸಿ ಮೋರ್ಚಾದ ಅಧ್ಯಕ್ಷ ಮೂಡ್ನಾಕೂಡು ಪ್ರಕಾಶ್, ಮಾಜಿ ಜಿ.ಪಂ.ಅಧ್ಯಕ್ಷ ಎಸ್.ಮಹದೇವಯ್ಯ, ನಗರ ಘಟಕ ಅಧ್ಯಕ್ಷ ರಾಜು, ಮುಖಂಡ ವೆಂಕಟರಮಣಸ್ವಾಮಿ (ಪಾಪು), ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆರೆಹಳ್ಳಿ ಮಹದೇವಸ್ವಾಮಿ, ಕಾರ್ಯದರ್ಶಿ ಪದ್ಮಾ, ಅರಕಲವಾಡಿ ನಾಗೇಂದ್ರ, ರಾಜ್ಯ ಕಾರ್ಯದರ್ಶಿ ಪರಮಾನಂದ್, ಗ್ರಾಮಾಂತರ ಮಂಡಲ ಅಧ್ಯಕ್ಷ ಮುತ್ತಿಗೆಮೂರ್ತಿ, ನಗರಸಭಾ ಸದಸ್ಯೆ ಕುಮುದಕೇಶವಮುರ್ತಿ, ಮಾಜಿ ಸದಸ್ಯ ಬಸವರಾಜು, ಬಸವನಪುರ ರಾಜಶೇಖರ್, ಕೊತ್ತನೂರು ರಾಜಶೇಖರ್, ವೇಣುಗೋಪಾಲ್, ಮಹೇಶ್ ಭಾಗವಹಿಸಿದ್ದರು.