ಜಿಲ್ಲೆ

ಸಮುದಾಯ ಭವನಕ್ಕೆ 3 ಲಕ್ಷ ರೂ. ಮಂಜೂರು

ಕಿರಣ್ ಮಾದರಹಳ್ಳಿ

ಚಾಮರಾಜನಗರ : ಸಮುದಾಯ ಭವನವನ್ನು ಉತ್ತಮ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಿ ಎಂದು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೈಸೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಸಲಹೆ ನೀಡಿದರು.

ಹರದನಹಳ್ಳಿ ವಲಯದ ವೆಂಕಟಯ್ಯಛತ್ರ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಿಗೆ ಅನುದಾನ ಮಂಜೂರಾತಿ ಪತ್ರವನ್ನು ವಿತರಣೆ ಮಾಡಿ ಮಾತನಾಡಿದರು. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಈ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 3 ಲಕ್ಷ ರೂ. ಮಂಜೂರು ಮಾಡಿದೆ. ಗ್ರಾಮಸ್ಥರು ಸಮುದಾಯ ಭವನವನ್ನು ಉತ್ತಮ ಕಾರ್ಯಗಳಿಗೆ ಉಪಯೋಗಿಸಿಕೊಳ್ಳಬೇಕು. ಹಲವು ಶುಭ ಸಮಾರಂಭ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ, ತಾಲೂಕು ಯೋಜನಾಧಿಕಾರಿ ಹರೀಶ್ ಕುಮಾರ್, ವಲಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.