ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಪ್ರಕ್ರಿಯೆಯಲ್ಲಿ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಗರದ ಸತ್ತಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಯೋಜನೆಯ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು.
ಯೋಜನೆಗೆ ಅರ್ಹಳಾದ ಪ್ರತಿ ಮಹಿಳೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಾದ್ಯಂತ 269 ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಶುಲ್ಕವಿಲ್ಲದೆ ಉಚಿತವಾಗಿ ಅರ್ಜಿ ಹಾಕಬಹುದು. ಮಹಿಳೆಯರೇ ಖುದ್ದಾಗಿ ಬಂದು ಅರ್ಜೀ ಸಲ್ಲಿಸಬೇಕು. ನಂತರ ಮಾಸಿಕವಾಗಿ 2000 ರೂ. ಕುಟುಂಬದ ಯಜಮಾನಿ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 2.9 ಲಕ್ಷ ಕುಟುಂಬಗಳಿಗೆ ಈ ಯೋಜನೆಯ ಅನುಕೂಲ ದೊರೆಯುತ್ತದೆ. ಕುಟುಂಬ ಯಜಮಾನಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರು ಯಾವುದೇ ಜಾತಿ, ಧರ್ಮ, ಭೇದವಿಲ್ಲದೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯಲ್ಲಿ ಮಹಿಳೆಯರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಅಧಿಕಾರಿ ವರ್ಗ ಒಂದಾಗಿ ಶ್ರಮವಹಿಸಬೇಕಿದೆ. ಬೇರೆ ಜಿಲ್ಲೆಗಳಿಗಿಂತಲೂ ಚಾಮರಾಜನಗರದಲ್ಲಿ ಉತ್ತಮವಾಗಿ ಗೃಹಲಕ್ಷ್ಮೀ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡೋಣ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗೀತಾಲಕ್ಷ್ಮೀ ಮಾತನಾಡಿ, ಕುಟುಂಬದ ಯಜಮಾನಿಯ ಆಧಾರ್‌ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್‌ಗೆ ಸಂದೇಶ ಬರುತ್ತದೆ, ಅದರ ಅನುಸಾರ ನೋಂದಣಿ ಮಾಡಿಕೊಳ್ಳಬೇಕು. ಬಿಪಿಎಲ್ ಕುಟುಂಬಗಳಿಗೆ ಮೊದಲ ಅವಕಾಶ ಇದ್ದು, ಹತ್ತಿರದ ಸೇವಾ ಕೇಂದ್ರಗಳಲ್ಲಿ ಯಾವುದೇ ಆತಂಕವಿಲ್ಲದೆ ನೋಂದಣಿ ಮಾಡಿಕೊಳ್ಳಿ. ಎಲ್ಲಾದರೂ ಸಮಸ್ಯೆ ಕಂಡುಬಂದರೆ ನೋಡಲ್ ಅಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಅಪರ ಜಿಲ್ಲಾಧಿಕಾರಿ ಗೀತಾ ಹುಡೇದಾ, ಯೋಜನಾ ನಿರ್ದೇಶಕಿ ಸುಧಾ, ನಗರಸಭೆ ಪೌರಾಯುಕ್ತ ರಾಮದಾಸ್, ನಗರಸಭೆ ಸದಸ್ಯರಾದ ನೀಲಮ್ಮ, ಖಲೀಲ್ ಉಲ್ಲಾ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ದೇವರು ಮತ್ತಷ್ಟು ಆಯಸ್ಸು, ಅಧಿಕಾರವನ್ನು ಕರುಣಿಸಲಿ. ನಮ್ಮಂತಹ ಬಡ ಕುಟುಂಬಗಳಿಗೆ ಇದು ಅನುಕೂಲವಾಗಲಿದೆ. ಈ ಯೋಜನೆಯಿಂದ ಬರುವ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಕೆ ಮಾಡುತ್ತೇನೆ.-ಶಿವಮ್ಮ ಕರಿನಂಜನಪುರ ಬಡಾವಣೆ, ಚಾಮರಾಜನಗರ ಮಹಿಳೆಯರಿಗೆ 2000 ರೂ. ಮಾಸಿಕ ಹಣ ನೀಡುವುದರಿಂದ ಕುಟುಂಬದ ನಿರ್ವಹಣೆಗೆ ಅನುಕೂಲವಾಗುತ್ತದೆ. ಕಾಂಗ್ರೆಸ್ ಸರ್ಕಾರ ಉತ್ತಮ ಯೋಜನೆಗಳನ್ನು ನೀಡಿದೆ. ಯಾವುದೇ ಗೊಂದಲವಿಲ್ಲದೆ ಅರ್ಜಿ ಸಲ್ಲಿಸಿದ್ದೇನೆ.-ಯಾಸ್ಮಿನ್ ತಾಜ್, ರೆಹಮತ್ ಬಡಾವಣೆ, ಚಾಮರಾಜನಗರ