ಜಿಲ್ಲೆ

ಶಿಸ್ತು, ಸಮಯಪ್ರಜ್ಞೆ ಕಲಿಸುವ ಎನ್‌ಎಸ್‌ಎಸ್ ಶಿಬಿರ

ಚಾಮರಾಜನಗರ: ವಿದ್ಯಾರ್ಥಿಗಳಲ್ಲಿ ನಮ್ಮ ಸುತ್ತಲಿನ ಪರಿಸರದ ಬಗ್ಗೆ ಅರಿವು ಮೂಡಿಸಲು ಹಾಗೂ ಶಿಸ್ತು, ಸಮಯ ಪ್ರಜ್ಞೆಯನ್ನು ಕಲಿಸಲು ಎನ್ಎಸ್ಎಸ್ ಶಿಬಿರಗಳು ಸಹಕಾರಿಯಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರ್ಚನಾ ತಿಳಿಸಿದರು.

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕುದೇರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ
2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಬೆಟ್ಟದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರವನ್ನು ಆಯೋಜಿಸಿರುವುದು ಸಂತಸ ತಂದಿದೆ. ಇದರಿಂದಾಗಿ ನಮ್ಮ ಜನರಿಗೆ ಹಾಗೂ ಬೆಟ್ಟದ ಭಕ್ತರಿಗೆ ನೆಲ, ಜಲ, ಸ್ವಚ್ಛತೆಯ ಬಗೆಗೆ ಅರಿವು ಸಿಕ್ಕಂತಾಗುತ್ತದೆ. ಶಿಬಿರಕ್ಕೆ ಆಗಮಿಸಿರುವ ವಿದ್ಯಾರ್ಥಿಗಳಿಗೆ ನಮ್ಮ ಪರಿಸರ ಮತ್ತು ಇನ್ನಿತರೆ ವಿಚಾರಗಳು ಅರಿವಿಗೆ ಬರುತ್ತದೆ. ಎಲ್ಲಾ ಶಿಬಿರಾರ್ಥಿಗಳಿಗೂ ಶುಭವಾಗಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಥಿಯೋಡರ್ ಲೂಥರ್ ಮಾತನಾಡಿ, ಎನ್.ಎಸ್.ಎಸ್ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಸೇವಾ ಮನೋಭಾವವನ್ನು ಬೆಳೆಸುತ್ತದೆ. ಇದರಿಂದಾಗಿ ಇಲ್ಲಿನ ಶಿಬಿರಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.

ಉಪನ್ಯಾಸಕ ಬಸವಣ್ಣ ಎಸ್.ಮೂಕಹಳ್ಳಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ರಾಷ್ಟ್ರಪ್ರೇಮವನ್ನು, ದೇಶಭಕ್ತಿಯನ್ನು ಮೂಡಿಸುತ್ತದೆ. ಆ ಮೂಲಕ ನಿಸ್ವಾರ್ಥ ಮನೋಭಾವವನ್ನು ಬೆಳೆಸಿ ದೇಶವನ್ನು ಕಟ್ಟುವ ಬಗೆಗೆ ಅರಿವನ್ನು ಮೂಡಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ವಾಣಿ, ದಿಲೀಪ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಶ್ರೀನಿವಾಸ್, ದೈಹಿಕ ಶಿಕ್ಷಣ ನಿರ್ದೇಶಕ ಮನೋಜ್ ಕುಮಾರ್ ಹಾಗೂ ಇತರರು ಹಾಜರಿದ್ದರು.