ಜಿಲ್ಲೆ

ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ

ಚಾಮರಾಜನಗರ: ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ವತಿಯಿಂದ ವಿತರಣೆ ಮಾಡುವ ಪಡಿತರ ಪಡೆದುಕೊಳ್ಳಲು ಸರ್ವರ್ ಸಮಸ್ಯೆ ಎದುರಾಗಿದ್ದು, ಸಾರ್ವಜನಿಕರು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುವಂತಾಗಿದೆ.

ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು ಹಾಗೂ ಯಳಂದೂರು ತಾಲೂಕಿನ ವ್ಯಾಪ್ತಿಯಲ್ಲಿ ಒಟ್ಟು 477 ನ್ಯಾಯಬೆಲೆ ಅಂಗಡಿಗಳು ಇದೆ. ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮ ತಡೆಯಲು ಲೆಕ್ಚರ್ ವಿತರಣಾ ವ್ಯವಸ್ಥೆಗೆ ಬದಲಾಗಿ, ಬಯೋಮೆಟ್ರಿಕ್ ಪದ್ಧತಿಯಲ್ಲಿ ಕಾರ್ಡದಾರರ ಹೆಬ್ಬೆರಳ ಗುರುತು ಪಡೆದು ಆಹಾರ ಧಾನ್ಯ ವಿತರಿಸುವ ವ್ಯವಸ್ಥೆ ತಂದಿದೆ. ಪೂರಕವಾದ ತಾಂತ್ರಿಕ ವ್ಯವಸ್ಥೆ ರೂಪಿಸದ ಕಾರಣ ಸರ್ವರ್ ಮೇಲೆ ಒತ್ತಡ ಬಿದ್ದು ಪದೇಪದೆ ಕೈಕೊಡುತ್ತಿತ್ತು. ಜಿಲ್ಲೆಯಲ್ಲಿ ಅ.17 ರಿಂದ ಈ ಮಾಹೆಯ ಪಡಿತರ ವಿತರಣೆ ಪ್ರಾರಂಭವಾಗಿದೆ.

ಆದರೆ ಬಯೋಲಾಗಿನ್ ತಂತ್ರಾಂಶದಲ್ಲಿ ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಎನ್‌ಐಸಿ ಸರ್ವರ್‌ನಿಂದ ಕೆಎಸ್‌ಡಿಸಿ ಎಂಬ ಹೊಸ ಸರ್ವರ್‌ಗೆ ಬದಲಾವಣೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ ಪಡಿತರ ವಿತರಿಸಲು ನ್ಯಾಯಬೆಲೆ ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ. ಸರ್ವರ್ ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ದಿನಕ್ಕೆ 10-12 ಕಾರ್ಡ್‌ದಾರರಿಗೆ ಮಾತ್ರ ಪಡಿತರ ವಿತರಿಸಲು ಸಾಧ್ಯವಾಗುತ್ತಿದೆ. ಇದರಿಂದಾಗಿ ಬಡವರು, ಕೂಲಿ ಕಾರ್ಮಿಕರು ದೈನಂದಿನ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿ ಮುಂದೆ ಕಾಯುವ ಸ್ಥಿತಿ ಎದುರಾಗಿದೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ಇದು ತಲೆಬಿಸಿಯಾಗಿದ್ದು, ಈ ಮಾಹೆಯ ಪಡಿತರ ವಿತರಣೆ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪಡಿತರ ವಿತರಣೆಗೆ ಸಮಸ್ಯೆ:
ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋಲಾಗಿನ್ ಮೂಲಕ ಪಡಿತರ ವಿತರಣೆಗೆ ಸರ್ವರ್ ಬಹುದೊಡ್ಡ ಸಮಸ್ಯೆಯಾಗಿದ್ದು, ಪಡಿತರ ವಿತರಣೆ ಮಾಡಲು ಪರದಾಡುವಂತಾಗಿದೆ. ಸರ್ವರ್ ಸಮಸ್ಯೆಯಿಂದಾಗಿ ಒಂದು ದಿನಕ್ಕೆ 10-12 ಜನರಿಗೂ ಕೂಡ ಪಡಿತರವನ್ನು ವಿತರಣೆ ಮಾಡಲಾಗುತ್ತಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಕಾರ್ಡ್ ಇರುವ ನ್ಯಾಯಬೆಲೆ ಅಂಗಡಿಯಲ್ಲಿ ಜನರು ಸಾಲುಗಟ್ಟಿ ನಿಲ್ಲುವಂತಾಗಿದೆ. ಒಂದು ಕಾರ್ಡ್‌ಗೆ ಪಡಿತರ ವಿತರಣೆ ಮಾಡಲು 15-20 ನಿಮಿಷ ಕಾಲಾವಕಾಶ ತೆಗೆದುಕೊಳ್ಳುತ್ತಿದೆ. ಬಡವರು ಹಾಗೂ ಕೂಲಿ ಕಾರ್ಮಿಕರು ಪಡಿತರ ಪಡೆದುಕೊಳ್ಳಲು ಕೂಲಿ ಕೆಲಸವನ್ನು ಬಿಟ್ಟು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೇ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಕಾರ್ಡುದಾರರು ಹಾಗೂ ಅಂಗಡಿ ಮಾಲೀಕರ ನಡುವೆ ಗಲಾಟೆಗಳು ನಡೆಯುತ್ತಿದೆ. ಈ ಮಾಹೆಯ ಪಡಿತರ ವಿತರಣೆಗೆ ಕೇವಲ 11 ದಿನಗಳು ಮಾತ್ರ ಬಾಕಿ ಇದ್ದು, ಪಡಿತರ ವಿತರಣೆಗೆ ಚೆಕ್‌ಲಿಸ್ಟ್ ಮೂಲಕ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಪಡಿತರ ವಿತರಕರ ಸಂಘದ ರಾಜ್ಯ ಉಪಾಧ್ಯಕ್ಷ ದುಂಡಯ್ಯ ಒತ್ತಾಯಿಸಿದ್ದಾರೆ.

ಸಂಕಷ್ಟದಲ್ಲಿ ಮಾಲೀಕರು:
ಜಿಲ್ಲೆಯ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಸುಮಾರು 6 ತಿಂಗಳಿಂದಲೂ ಕಮೀಷನ್ ಬಾರದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಒಂದು ಕ್ವಿಂಟಾಲ್‌ಗೆ 150 ರೂ. ಕಮಿಷನ್ ನೀಡಲಾಗುತ್ತದೆ. ನ್ಯಾಯಬೆಲೆ ಅಂಗಡಿಗೆ ಬರುವ ಒಟ್ಟು ಮೌಲ್ಯದ ಪಡಿತರದ ಮೇಲೆ ಕಮಿಷನ್ ನೀಡಲಾಗುತ್ತದೆ. ಇತ್ತೀಚೆಗಷ್ಟೇ ಒಂದು ತಿಂಗಳ ಕಮಿಷನ್ ಮಾತ್ರ ವಿತರಣೆ ಮಾಡಲಾಗಿದೆ. ಆದರೇ ಆ ತಿಂಗಳ ಕಮಿಷನ್ ಅದೇ ತಿಂಗಳಲ್ಲಿ ನೀಡಿ ಎಂದು ಒತ್ತಾಯ ಮಾಡಿದರೂ ಸೂಕ್ತ ರೀತಿಯಲ್ಲಿ ಕಮಿಷನ್ ನೀಡುತ್ತಿಲ್ಲ. ಪರಿಣಾಮವಾಗಿ ಅಂಗಡಿ ಬಾಡಿಗೆ, ಕಾರ್ಮಿಕರ ಕೂಲಿ, ಇಂಟರ್‌ನೆಟ್ ಹಾಗೂ ಇನ್ನಿತರೆ ಖರ್ಚು ನಿಭಾಯಿಸಲು ಅಂಗಡಿ ಮಾಲೀಕರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಎದುರಾಗುವ ಸರ್ವರ್ ಸಮಸ್ಯೆಗಳಿಂದ ಕಾರ್ಡ್‌ದಾರರು ಹಾಗೂ ಮಾಲೀಕರ ನಡುವೆ ಸಮಸ್ಯೆ ಉಂಟಾಗುತ್ತಿದ್ದು, ಅಂಗಡಿ ಮಾಲೀಕರ ಸಮಸ್ಯೆ ಬಗೆಹರಿಸಲು ಇಲಾಖೆ ಹಾಗೂ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅ.17 ರಿಂದ ಹೊಸಸರ್ವರ್ ವ್ಯವಸ್ಥೆಯಾಗಿದೆ. ಕಳೆದ 2 ದಿನಗಳಿಂದ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುತ್ತದೆ. ನ್ಯಾಯಬೆಲೆ ಅಂಗಡಿಯವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಕಮಿಷನ್ ಕೂಡ ಹಂತಹಂತವಾಗಿ ವಿತರಣೆ ಮಾಡಲಾಗುತ್ತಿದೆ.-ಯೋಗಾನಂದ್, ಉಪನಿರ್ದೇಶಕ, ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಚಾಮರಾಜನಗರ ಈ ತಿಂಗಳ ಪಡಿತರ ವಿತರಣೆಗೆ ಸರ್ವರ್ ಸಮಸ್ಯೆ ಎದುರಾಗಿದ್ದು, ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯುತ್ತಿದ್ದಾರೆ. ಪಡಿತರ ವಿತರಣೆಗೆ ಇನ್ನು 10 ದಿನ ಅವಕಾಶವಿದ್ದು, ಪರ್ಯಾಯ ಅವಕಾಶವನ್ನು ಕಲ್ಪಿಸಿಕೊಡಬೇಕು.-ದುಂಡಯ್ಯ, ರಾಜ್ಯ ಉಪಾಧ್ಯಕ್ಷ, ಪಡಿತರ ವಿತರಕರ ಸಂಘ, ಚಾಮರಾಜನಗರ ಈ ಬಾರಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ವಿತರಣೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಮಾಲೀಕರು ಮತ್ತು ಕಾರ್ಡ್‌ದಾರರ ನಡುವೆ ಗಲಾಟೆಯಾಗುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದೇವೆ. ಅದರಂತೆ ಮಾಲೀಕರ ಕಮಿಷನ್ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು.-ಗಿರೀಶ್, ಜಿಲ್ಲಾಧ್ಯಕ್ಷ, ರಾಜ್ಯ ಪಡಿತರ ವಿತರಕರ ಸಂಘ, ಚಾಮರಾಜನಗರ