ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗಕ್ಕಾಗಿ ಪದವಿ ಪಡೆದರೆ ಮಾತ್ರ ಸಾಕಾಗುವುದಿಲ್ಲ. ಪದವಿಗೆ ಪೂರಕವಾದ ಕೌಶಲ್ಯಗಳು ಸಹ ಮುಖ್ಯವಾಗುತ್ತವೆ ಎಂದು ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಚಾ.ನಗರ ವಿಶ್ವವಿದ್ಯಾನಿಲಯ ಹಾಗೂ ಸಿಗ್ಮಾಪ್ಲಸ್ ಗೋವಾ ನಡುವೆ ಒಡಂಬಡಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಚಾ.ನಗರ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುತ್ತಿರುವ ಎಂ.ಬಿ.ಎ, ಎಂ.ಸಿ.ಎ ಹಾಗೂ ಎಂ.ಕಾಂ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಹಾಗೂ ಸ್ಥಳ ನಿಯುಕ್ತಿಗೆ ಪೂರಕವಾಗುವ ಕ್ರೆಡಿಟ್ ಆಧಾರಿತ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪೂರಕವಾಗುವ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಇದು ಸಹಕಾರಿಯಾಗಲಿದೆ ಎಂದರು.
ಸಿಗ್ಮಾ ಪ್ಲಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗುರುರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ ಉತ್ತಮ ಕೌಶಲ್ಯಗಳನ್ನು ಪಡೆದ ವಿದ್ಯಾರ್ಥಿಗಳಿಗೆ ನಮ್ಮ ಕಂಪನಿಯಲ್ಲಿಯೇ ಉದ್ಯೋಗವನ್ನು ನೀಡಲಾಗುವುದು ಎಂದರು.
ಸಿಗ್ಮಾ ಪ್ಲಸ್‌ನ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಪಾಟೀಲ್ ಮಾತನಾಡಿ, ಚಾಮರಾಜನಗರ ವಿಶ್ವವಿದ್ಯಾನಿಲಯವು ಕೌಶಲ್ಯಾಧಾರಿತ ತರಬೇತಿ ಹಾಗೂ ಸ್ಥಳ ನಿಯುಕ್ತಿ ಸಂಬಂಧ ಒಪ್ಪಂದ ಮಾಡಿಕೊಂಡ ಕರ್ನಾಟಕದ ಮೊದಲ ವಿಶ್ವವಿದ್ಯಾಲಯವಾಗಿದೆ. ಇಲ್ಲಿನ ವಿದ್ಯಾರ್ಥಿಗಳಿಗ ಉತ್ತಮ ಭವಿಷ್ಯವಿದ್ದು, ಎಲ್ಲಾ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಲಿಂಗರಾಜು, ಪಿ.ಎಂ.ಇ.ಬಿ ನಿರ್ದೇಶಕ ಸಿದ್ದರಾಜು, ಸಿಗ್ಮಾದ ಸಂಪನ್ಮೂಲ ವ್ಯಕ್ತಿಗಳಾದ ರೂಪ ಪಾಟೀಲ್, ಸೌಮ್ಯಪ್ರಕಾಶ್, ಪವನ್ ಸುರೇಶ್, ಉಪನ್ಯಾಸಕರಾದ ಹಾಜೀರಾ ನಸ್ರಿನ್, ಕಾಮಿಲ ತಬ್ಸುಮ್, ಚೇತನ್, ಡಾ.ಮಹದೇವಮೂರ್ತಿ, ಡಾ.ಮಹದೇವಸ್ವಾಮಿ, ಬಸವಣ್ಣ ಮೂಕಹಳ್ಳಿ ಇತರರು ಹಾಜರಿದ್ದರು.