ಗುಂಡ್ಲುಪೇಟೆ: ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹಾಗೂ ಹಕ್ಕುಗಳ ರಕ್ಷಣೆ ಮಾಡಲು ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಬಸವರಾಜ ತಳವಾರ್ ಅಭಿಪ್ರಾಯಪಟ್ಟರು.
ಬಾಲ್ಯವಿವಾಹದ ಬಗ್ಗೆ ಕಾನೂನು ಅರಿವು ಶಿಬಿರ ಹಾಗೂ ಜಾಗೃತಿ ಜಾಥಾಕ್ಕೆ ಗುರುವಾರ ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಮಕ್ಕಳನ್ನು ಕೆಲಸಗಳಿಗೆ ಬಳಕೆ ಮಾಡಿಕೊಳ್ಳುವುದು, ಬಾಲ್ಯದಲ್ಲಿಯೇ ವಿವಾಹ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರಾದ ಶಿವಕುಮಾರ್, ಸಿವಿಲ್ ಹಾಗೂ ಜೆಎಂಎಫ್‌ಸಿ ಹೆಚ್ಚುವರಿ ನ್ಯಾಯಾಧೀಶರಾದ ಕಾಂತಮ್ಮ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ, ಸಾಂತ್ವನ ಮಹಿಳಾ ಕೇಂದ್ರದ ಸರಸ್ವತಿ, ಗಂಗಾಧರ್ ಸೇರಿದಂತೆ ಹಲವರು ಇದ್ದರು.