ಜಿಲ್ಲೆ

ಸಂಕಷ್ಟಕ್ಕೆ ಸಿಲುಕಿದ ಮಕ್ಕಳಿಗೆ ನೆರವು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಜಿಲ್ಲೆಯಲ್ಲಿ ಭಿನ್ನ-ವಿಭಿನ್ನ ಸಂಕಷ್ಟಗಳಿಗೆ ಸಿಲುಕಿರುವ ಮಕ್ಕಳಿಗೆ ಆರ್ಥಿಕ ನೆರವು ದೊರೆಯುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರಾಯೋಕತ್ವ ಕಾರ್ಯಕ್ರಮವು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ತಾತ್ಕಾಲಿಕ ಆರ್ಥಿಕ ಸಹಾಯ(1 ವರ್ಷ ಪ್ರತಿ ತಿಂಗಳು 4 ಸಾವಿರ ರೂ.ನೆರವು) ನೀಡುತ್ತಿದೆ. ಕೇಂದ್ರ ಸರ್ಕಾರದಿಂದ ಶೇ.60 ಮತ್ತು ರಾಜ್ಯ ಸರ್ಕಾರದಿಂದ ಶೇ.40ರಷ್ಟು ಅನುದಾನ ಸಿಗುತ್ತದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ನೀಡಿರುವ ಮಾಹಿತಿ ಪ್ರಕಾರ, ಪ್ರಯೋಜಕತ್ವ ಕಾರ್ಯಕ್ರಮದಡಿ 2022-23ನೇ ಸಾಲಿನಲ್ಲಿ 528, 2023-24ನೇ ಸಾಲಿನಲ್ಲಿ 515, ಪ್ರಸ್ತುತ ಸಾಲಿನಲ್ಲಿ 358 ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ನೆರವು ಪಡೆಯುವ ಮಕ್ಕಳ್ಯಾರು?: ಕಾನೂನು ಸಂಘರ್ಷ ಹೊಂದಿರುವ ಹಾಗೂ ಪಾಲನೆ ಸಂರಕ್ಷಣೆ ಅಗತ್ಯವಿರುವ ಮಕ್ಕಳು, ಮಕ್ಕಳ ಪಾಲನಾ ಸಂಸ್ಥೆಗಳಿಂದ ಕೌಟುಂಬಿಕ ವಾತಾವರಣಕ್ಕೆ ಬಿಡುಗಡೆ ಮಾಡಿದ ಮಕ್ಕಳು, ಜೆಜೆ ಕಾಯ್ದೆ 2015ರ ಪ್ರಕಾರ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಹೊಂದಿದ್ದರೆ, ಅಂದರೆ ವಸತಿ ರಹಿತರು, ಯಾವುದಾದರೂ ನೈಸರ್ಗಿಕ ವಿಕೋಪಗಳ ಸಂತ್ರಸ್ತರು, ಎಚ್‌ಐವಿ ಪೀಡಿತ ಮಗು, ವಿಶೇಷಚೇತನ ಮಗು, ತಪ್ಪಿಸಿಕೊಂಡಿರುವ ಅಥವಾ ಓಡಿ ಬಂದಿರುವ ಮಗು, ಬಾಲ ಭಿಕ್ಷುಕರು, ಬೀದಿ ಬದಿ ವಾಸವಿರುವವರು, ಶೋಷಣೆಗೆ ಒಳಪಟ್ಟ ಮಕ್ಕಳು ಸೌಲಭ್ಯ ಪಡೆಯಬಹುದಾಗಿದೆ.

ಅಲ್ಲದೇ, ಕಡುಬಡತನದ ಅನಾಥ ಅರ್ಹ ಮಕ್ಕಳು, ದಮನಿತ ಮಹಿಳೆಯರ ಮಕ್ಕಳು, ಬಾಲ ಕಾರ್ಮಿಕ ಸಂತ್ರಸ್ತ ಮಕ್ಕಳು, ಪಿಎಂ ಕೇರ್ಸ್‌ ಾರ್ ಚಿಲ್ಡ್ರನ್ ಯೋಜನೆಯಡಿ ಬರುವ ಮಕ್ಕಳು, ಅಶಕ್ತ ವಿಧವೆಯರು, ಪೋಕ್ಸೋ ಸಂತ್ರಸ್ತ ಮಕ್ಕಳು, ಜೈಲು ವಾಸಿಗಳ ಮಕ್ಕಳು ಪ್ರಯೋಜಕತ್ವ ಕಾರ್ಯಕ್ರಮದಡಿ ಆರ್ಥಿಕ ನೆರವು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಸುವ ಮಕ್ಕಳು ಈ ಮಾನದಂಡಗಳನ್ನು ಹೊಂದಿರಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಅರ್ಹರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಮಕ್ಕಳ ಕಲ್ಯಾಣ ಸಮಿತಿ ಶಿಾರಸು ಮಾಡುತ್ತದೆ.

ಗೊಂದಲಕ್ಕೀಡು ಮಾಡಿದ್ದ ಸಂದೇಶ:
ಪ್ರಾಯೋಜಕತ್ವ ಕಾರ್ಯಕ್ರಮದ ಕುರಿತು ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಸಂದೇಶವೊಂದು ಗೊಂದಲ ನಿರ್ಮಾಣ ಮಾಡಿತ್ತು. ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್ ದೊರೆಯುತ್ತದೆ ಎನ್ನುವ ಸಂದೇಶ ಎಲ್ಲೆಡೆ ವೈರಲ್ ಆಗಿತ್ತು. ಇದನ್ನು ನೋಡಿ ಹಲವರು ಅರ್ಜಿ ಸಲ್ಲಿಕೆಗಾಗಿ ಇಲಾಖೆಗೆ ಬಂದಿದ್ದರು. ಆದರೆ ಈ ಸೌಲಭ್ಯ ಪಡೆಯಲು ಅರ್ಹರು ಮಾತ್ರ ಅರ್ಜಿ ಸಲ್ಲಿಸಬೇಕು. ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಸಲ್ಲಿಸಿ ಅರ್ಹ ಮಕ್ಕಳಿಗೆ ಶಿಾರಸು ಮಾಡುತ್ತದೆ. ಇದರ ಸಂಪೂರ್ಣ ಮಾಹಿತಿ ತಿಳಿದ ಬಳಿಕ ಅರ್ಜಿ ಸಲ್ಲಿಸಲು ಬಂದಿದ್ದವರು ಹಿಂದಿರುಗಿದರು. ಈ ಕುರಿತು ಮಕ್ಕಳ ರಕ್ಷಣಾ ಘಟಕವು ಸ್ಪಷ್ಟನೆಯನ್ನೂ ನೀಡಿದೆ.

ಮಕ್ಕಳಿಗೆ ಸಂಕಷ್ಟ ತಂದ ಕೋವಿಡ್:
ಪ್ರಯೋಜಕತ್ವ ಕಾರ್ಯಕ್ರಮದಡಿ ಕಳೆದ ಎರಡು ವರ್ಷಗಳ ಹಿಂದಿನಿಂದ ಆರ್ಥಿಕ ನೆರವು ಪಡೆಯುತ್ತಿರುವ ಮಕ್ಕಳ ಅಂಕಿ-ಅಂಶ ಗಮನಿಸಿದರೆ 500ಕ್ಕೂ ಹೆಚ್ಚು ಮಕ್ಕಳು ಸೌಲಭ್ಯ ನೆರವು ಪಡೆಯುತ್ತಿದ್ದಾರೆ.
ಇವರಲ್ಲಿ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಕಡುಬಡ ಮಕ್ಕಳು ಹೆಚ್ಚಿದ್ದಾರೆ. ಕೋವಿಡ್ ಜನರ ಜೀವಗಳನ್ನು ತರಗೆಲೆಯಂತೆ ಉದುರಿಸಿಬಿಟ್ಟಿತು. ಕರೊನಾ ಮಹಾಮಾರಿಗೆ ತಂದೆ ಅಥವಾ ತಾಯಿ ಮೃತಪಟ್ಟು ಮಕ್ಕಳು ಏಕ ಪಾಲಕರ ಪಾಲನೆಯಲ್ಲಿದ್ದಾರೆ. ಅಂತಹವರು ಪ್ರಾಯೋಜಕತ್ವ ಕಾರ್ಯಕ್ರಮದಡಿ ಅರ್ಥಿಕ ನೆರವು ಪಡೆಯುತ್ತಿರುವುದರಿಂದ ಸೌಲಭ್ಯ ಪಡೆಯುತ್ತಿರುವ ಮಕ್ಕಳ ಸಂಖ್ಯೆ 500ಕ್ಕೂ ಹೆಚ್ಚಾಗಿದೆ. ಅಲ್ಲದೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಈ ರೀತಿಯ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿ ಆರ್ಥಿಕ ನೆರವು ದೊರೆಯುವಂತೆ ಮಾಡಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

ಸಂಕಷ್ಟದಲ್ಲಿರುವ ಮಕ್ಕಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲಾಗುತ್ತಿದೆ. ವಿಶೇಷ ಅಗತ್ಯವುಳ್ಳ ಮಕ್ಕಳು ಇದನ್ನು ಬಳಸಿಕೊಳ್ಳಬಹುದು.ಚೆಲುವರಾಜು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಚಾಮರಾಜನಗರ