ಚಾಮರಾಜನಗರ: ವಿದ್ಯಾರ್ಥಿಗಳು ಮಾತಿಗಿಂತಲೂ ನಿಮ್ಮ ಪ್ರಯತ್ನದ ಮೇಲೆ ನಂಬಿಕೆ ಇರಿಸಿ, ಗುರಿಯನ್ನು ಸಾಧಿಸಿ ಎಂದು ಖ್ಯಾತ ಸುಗಮ ಸಂಗೀತ ಗಾಯಕ ಮತ್ತು ಸಂಗೀತ ನಿರ್ದೇಶಕ ಸಿ.ವಿಶ್ವನಾಥ್ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾನು ಕೂಡ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿ ಮತ್ತು ದಾರಿ ಇರಬೇಕು. ಎಲ್ಲಾ ಅವಕಾಶಗಳು ಇದ್ದವರಿಗಿಂತಲೂ, ಊಟ-ಬಟ್ಟೆಗೆ ಅವಕಾಶ ಇಲ್ಲದವರೇ ಸಾಧನೆ ಮಾಡಿರುವುದು. ಶರಣಾಗತಿ ಯಾರಲ್ಲಿ ಬರುತ್ತದೋ ಅಂತವರಿಗೆ ಎಲ್ಲಾ ಅವಕಾಶಗಳು ಒದಗಿ ಬರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮಾತಿಗಿಂತಲೂ ಪ್ರಯತ್ನದ ಮೇಲೆ ನಂಬಿಕೆ ಇರಿಸಬೇಕು. ಈ ದೇಶದಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದ್ದು, ಕೆಲಸ ಮಾಡುವವರ ಸಂಖ್ಯೆ ಕಡಿಮೆ ಇದೆ. ಹಾಗಾಗಿಯೇ ಈ ದೇಶದಲ್ಲಿ ಇಂದಿಗೂ ಸಮಾನತೆ ಬರಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕುವೆಂಪು ಮತ್ತು ಬೆಂದ್ರೆ ಅವರ ಅನುಭವ ಸಾರವನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ ಮಾತನಾಡಿ, ಜೆಎಸ್‌ಎಸ್ ಮಹಿಳಾ ಕಾಲೇಜು ಅನೇಕ ಮೈಲುಗಲ್ಲು ಸಾಧಿಸಿದೆ. ಹಲವು ಪ್ರತಿಭಾನ್ವಿತರು ಈ ಕಾಲೇಜಿನಿಂದ ಹೊರಹೊಮ್ಮಿದ್ದಾರೆ. ವಿದ್ಯಾರ್ಥಿಗಳ ಒಳಗೆ ಅಂತರ್ಗತವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ. ಶೈಕ್ಷಣಿಕ ಬೆಳವಣಿಗೆ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಉಂಟುಮಾಡಲು ವಿದ್ಯಾರ್ಥಿ ಸಂಘದ ಮೂಲಕ ವರ್ಷವಿಡೀ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ವ್ಯಕ್ತಿತ್ವದ ಬೆಳವಣಿಗೆಗೆ ಅವಕಾಶವನ್ನು ಒದಗಿಸಲು, ಅವರ ಸೃಜನಶೀಲತೆ ಮತ್ತು ಕಲಿಕಾ ಮಟ್ಟವನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ. ಕೇವಲ ಸಾಂಸ್ಕೃತಿಕ ಚಟುವಟಿಕೆ ಅಲ್ಲದೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ನಾಯಕತ್ವ ಗುಣವನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿದೆ ಎಂದು ತಿಳಿಸಿದರು. ವೇದಿಕೆ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಚೆಸ್ಕಾಂ ವಿಚಕ್ಷಣ ದಳ ಪೊಲೀಸ್ ನಿರೀಕ್ಷಕಿ ಎಸ್.ಶಶಿಕಲಾ, ಅಂತಾರಾಷ್ಟ್ರೀಯ ಅಥ್ಲೆಟಿಕ್ ರೀನಾ ಜಾರ್ಜ್, ಜೆಎಸ್‌ಎಸ್ ಮಹಾ ವಿದ್ಯಾಪೀಠದ ಕಾಲೇಜು ವಿಭಾಗ ಸಹಾಯಕ ನಿರ್ದೇಶಕ ಬಿ.ನಿರಂಜನಮೂರ್ತಿ, ಸಹಾಯಕ ಪ್ರಾಧ್ಯಾಪಕಿ ಜಮುನಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಉಮೇಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆರ್.ಬಿ.ಕೃತಿಕಾ, ಕಾರ್ಯದರ್ಶಿ ವಿ.ಜ್ಯೋತಿ, ಎಂ.ಜಿ. ನಿತ್ಯಶ್ರೀ ಹಾಗೂ ಇತರರು ಉಪಸ್ಥಿತರಿದ್ದರು.