ಜಿಲ್ಲೆ

ಜಾತಿಜನಗಣತಿ ಜಾರಿಗೊಳಿಸುವಂತೆ ಆಗ್ರಹ

ಎ.ಎಸ್.ಮಣಿಕಂಠ

ಚಾಮರಾಜನಗರ: ಹಿಂದುಳಿದ ವರ್ಗಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿಯುವ ನಿಟ್ಟಿನಲ್ಲಿ ನಡೆಸಲಾಗಿರುವ ಜಾತಿಗಣತಿ ವರದಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಮಂಗಲ ಶಿವಕುಮಾರ್ ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯಅವರು ಸುಮಾರು 179 ಕೋಟಿ ರೂ, ಖರ್ಚು ಮಾಡಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅರಿಯಲು ಕಾಂತರಾಜು ಆಯೋಗವನ್ನು ನೇಮಕ ಮಾಡಿದ್ದರು. ಈಗಾಗಲೇ ವರದಿಯು ಸರ್ಕಾರದ ಕೈ ಸೇರಿದ್ದು, ಹಿಂದುಳಿದ ವರ್ಗಗಳ ನಾಯಕರಾಗಿರುವ ಸಿದ್ದರಾಮಯ್ಯ ಕೂಡಲೇ ವರದಿಯನ್ನು ಬಿಡುಗಡೆ ಮಾಡಬೇಕು. ಈ ಮೂಲಕ ಹಿಂದುಳಿದ ವರ್ಗಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಒತ್ತಾಯಿಸಿದರು.

ಸ್ವಾತಂತ್ರ್ಯಬಂದು 75 ವರ್ಷಗಳು ಕಳೆದರೂ, ಹಿಂದುಳಿದ ವರ್ಗಗಳ ಹಣೆಪಟ್ಟಿಯನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಈ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ ವರ್ಗಗಳ ಧ್ವನಿಯಾಗಿದ್ದರು. ಆ ನಂತರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುಂದಾಗಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಕಳೆದರೂ ಇನ್ನೂ ಕೂಡ ಜಾತಿಗಣತಿ ವರದಿ ಜಾರಿ ಮಾಡಿಲ್ಲ. ಮುಡಾ ಹಗರಣದಿಂದಾಗಿ ಜಾತಿ ಗಣತಿ ವರದಿ ಮುನ್ನೆಲೆಗೆ ಬಂದಿದೆ. ಪ್ರಸ್ತುತ ಸಿದ್ದರಾಮಯ್ಯ ಅವರು ರಾಜಕೀಯ ಮಾಡುತ್ತಿದ್ದು, ಅವರಿಗೆ ಹಿಂದುಳಿದ ವರ್ಗಗಳ ಮೇಲೆ ಇಚ್ಛಾಶಕ್ತಿ ಇದ್ದರೆ ವರದಿಯನ್ನು ತಕ್ಷಣ ಜಾರಿ ಮಾಡಬೇಕು ಎಂದರು.

ಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಟರಾಜೇಗೌಡ, ರಾಮಶೆಟ್ಟಿ, ಉಪಾಧ್ಯಕ್ಷ ವೆಂಕಟರಾಜು, ಅರಸಶೆಟ್ಟಿ, ಲಕ್ಷ್ಮಣ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಸುರೇಶ್ ಇದ್ದರು.