ಚಾಮರಾಜನಗರ: ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಬೆಟ್ಟ, ಗುಡ್ಡಗಳ ಮೇಲೆ ವಾಸ ಮಾಡುವವರು ದಾರುಣವಾಗಿ ಮೃತಪಡುವ ಪ್ರಕರಣಗಳು ಮಳೆಗಾಲದಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೂ ಕಾಣಸಿಗುತ್ತವೆ. ಶಿಥಿಲ ಗೊಂಡೆಗಳ ನಡುವೆ ಜೀವಂತ ಸಮಾಧಿಯಾದವರ ಲೆಕ್ಕಗಳಿವೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿ 4 ವರ್ಷಗಳಲ್ಲಿ ಮನೆಯ ಛಾವಣಿ ಅಥವಾ ಗೋಡೆ ಕುಸಿದು 7 ಜನ ಮೃತಪಟ್ಟಿದ್ದಾರೆ. 2018-19ರಲ್ಲಿ 2, 2019-20ರಲ್ಲಿ 2, 2022-23ರಲ್ಲಿ 2, ಪ್ರಸ್ತುತ-1 ಪ್ರಕರಣ ವರದಿಯಾಗಿದೆ. ಮಳೆಗಾಲದ ಸಂದರ್ಭದಲ್ಲಿ ಶಿಥಿಲಗೊಂಡಿರುವ ಮನೆಗಳು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಸ್ಥಿತಿಯಲ್ಲಿರುತ್ತವೆ. ಇದರ ಬಗ್ಗೆ ತಿಳಿಯದ ಅಥವಾ ತಿಳಿದಿದ್ದರೂ ನಿರ್ಲಕ್ಷ್ಯವಹಿಸುವುದರಿಂದ ಜೀವಕ್ಕೆ ಕುತ್ತು ಬರುತ್ತಿದೆ. ಮಳೆಯ ಆರ್ಭಟ ಹೆಚ್ಚಾಗಿ ರಾತ್ರೋರಾತ್ರಿ ಗೋಡೆ ಕುಸಿದು ಬಿಡುವುದು, ಛಾವಣಿ ನೆಲಕ್ಕುರುಳುವುದರಿಂದ ಒಳಗೆ ಮಲಗಿರುವವರು ಜೀವಂತ ಸಮಾಧಿಯಾಗುತ್ತಿದ್ದಾರೆ. ಭೂಕುಸಿತ, ಪ್ರವಾಹ ಸಂಭವಿಸಿದಾಗ ಪ್ರಾಣಹಾನಿ ಸಂಭವಿಸುವ ಅಪಾಯವಿದೆ. ಅದರೆ ಸಣ್ಣ ಮಳೆಗೂ ಮನೆಗಳ ಗೋಡೆ ಕುಸಿಯುವ ಸ್ಥಿತಿಯಲ್ಲಿರುವುದು ಜೀವಗಳ ಬಲಿಯನ್ನು ಮುಂದುವರಿಸಿದೆ.
ಜಿಲ್ಲೆಯಲ್ಲಿ ಬಡಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಹಳೆಯ ಮನೆಗಳು, ಮಣ್ಣಿನ ಗೋಡೆಗಳಿಂದ ಕಟ್ಟಿದ ಸೂರುಗಳು ಹೆಚ್ಚಾಗಿವೆ. ಬಿಸಿಲು, ಮಳೆಗೆ ಮನೆಗಳು ಶಿಥಿಲಗೊಂಡಿವೆ. ಆರ್ಥಿಕ ಸಮಸ್ಯೆ ಮನೆಗಳ ರಿಪೇರಿಗೆ ಅಡ್ಡಿಯುಂಟು ಮಾಡುತ್ತಿದೆ. ಮಳೆಗಾಲಕ್ಕೂ ಮೊದಲು ಮನೆಗಳನ್ನು ಭದ್ರಗೊಳಿಸಿಕೊಳ್ಳುವ ದೂರದೃಷ್ಟಿಯೂ ಕಡಿಮೆಯಾಗುತ್ತಿದೆ. ಅಕಾಲಿಕ ಮಳೆ ಬಂದಾಗಲಂತೂ ಅವಾಂತರಗಳು ಸೃಷ್ಟಿಯಾಗುತ್ತಿವೆ. ಈ ರೀತಿಯ ಅವಘಡದಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪರಿಹಾರ ನೀಡಲಾಗುತ್ತದೆ.
ಶಿಥಿಲ ಮನೆಗಳ ಸರ್ವೇ:
ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಮತ್ತು ಮನೆಯ ಛಾವಣಿ ಕುಸಿಯುವ ಹಂತದಲ್ಲಿರುವ ಮನೆಗಳ ಸರ್ವೇ ಮಾಡಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್, ಎಲ್ಲ ತಹಸೀಲ್ದಾರ್‌ಗಳು, ಎಲ್ಲ ತಾಲೂಕು ಪಂಚಾಯಿತಿ ಇಒಗಳು, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಶಾಖೆ ಸಹಾಯಕ ನಿರ್ದೇಶಕರಿಗೆ ಕ್ರಮವಹಿಸಲು ತಿಳಿಸಲಾಗಿತ್ತು. ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಶಿಥಿಲಗೊಂಡಿರುವ ಮನೆಗಳಿಂದ ಜನರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕೆಂದು ನಿರ್ದೇಶನ ನೀಡಲಾಗಿತ್ತು. ಒಂದು ವೇಳೆ ಶಿಥಿಲಗೊಂಡಿರುವ ಮನೆಯಿಂದ ಅವಘಡಗಳು ಸಂಭವಿಸಿ ಪ್ರಾಣಹಾನಿ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು.
ಬಾಗಳಿಯಲ್ಲಿ ಜೀವಂತ ಸಮಾಧಿ:
ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಮಳೆಗೆ ಮನೆಯ ಗೋಡೆ ಕುಸಿದು ಕೂಲಿ ಕಾರ್ಮಿಕನೊಬ್ಬ ಇತ್ತೀಚೆಗೆ ಮೃತಪಟ್ಟನು. ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದ ಚಂದ್ರ(39) ಮೃತಪಟ್ಟ ಕೂಲಿ ಕಾರ್ಮಿಕ. ಜೋರು ಮಳೆಯಿಂದಾಗಿ ಮನೆಯ ಗೋಡೆ ಶಿಥಿಲಗೊಂಡಿತ್ತು. ಚಂದ್ರ ಮನೆಯಲ್ಲಿ ಮಲಗಿದ್ದಾಗ ಗೋಡೆ ಕುಸಿದಿದ್ದು, ಸ್ಥಳದಲ್ಲೇ ಮೃತಪಟ್ಟನು. ಇದೇ ರೀತಿ ಹೊನ್ನೂರು ಗ್ರಾಮದಲ್ಲೂ ಮಳೆಗೆ ಮನೆಯ ಗೋಡೆ ಕುಸಿದಿದೆ.
ಸಿಡಿಲು, ಮರ ಬಿದ್ದು ಸಾವು:
ಮಳೆಗಾಲದಲ್ಲಿ ಸಿಡಿಲು ಬಿಡಿದು ಮತ್ತು ಮರ ಉರುಳಿಯೂ ಪ್ರಾಣಹಾನಿ ಸಂಭವಿಸಿದೆ. 2017-18ರಲ್ಲಿ ಸಿಡಿಲಿಗೆ 1, 2018-19ರಲ್ಲಿ ಮರ ಉರುಳಿ ಬಿದ್ದು 1, 2020-21ನೇ ಸಾಲಿನ ಸಿಡಿಲಿಗೆ 1, 2022-23ರಲ್ಲಿ ಸಿಡಿಲಿಗೆ 2, ಮರ ಬಿದ್ದು 2 ಸಾವಿನ ಪ್ರಕರಣಗಳು ಸಂಭವಿಸಿವೆ.
ಶಿಥಿಲಗೊಂಡಿರುವ ಮನೆಗಳಲ್ಲಿ ವಾಸವಿರುವವರನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಬೇಕೆಂದು ರಾಜ್ಯ ಸರ್ಕಾರದಿಂದ ನಮಗೆ ನಿರ್ದೇಶನವಿತ್ತು. ಈ ರೀತಿಯಲ್ಲಿ ಯಾವುದೂ ಇಲ್ಲ ಎಂದು ತಹಸೀಲ್ದಾರ್‌ಗಳು ನನಗೆ ಮಾಹಿತಿ ನೀಡಿದ್ದರು. ಚಾಮರಾಜನಗರ ತಾಲೂಕಿನ ಬಾಗಳಿಯಲ್ಲಿ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟ ಪ್ರಕರಣದಲ್ಲಿ ಶಿಥಿಲ ಮನೆಗೊಂಡಿದ್ದ ಮಾಹಿತಿ ಯಾಕೆ ಕೊಟ್ಟಿಲ್ಲ ಎಂದು ವಿಚಾರಣೆ ಮಾಡುತ್ತಿದ್ದೇನೆ. ಶಿಲ್ಪಾನಾಗ್, ಜಿಲ್ಲಾಧಿಕಾರಿ, ಚಾಮರಾಜನಗರ