ಜಿಲ್ಲೆ

ಕೃಷಿ ಪಂಡಿತ, ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: 2023-24ನೇ ಸಾಲಿನ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಮತ್ತು ಆತ್ಮ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಮಗ್ರ ಕೃಷಿ ಪದ್ಧತಿ, ಬೆಳೆ ಪದ್ಧತಿಗಳು, ಬೆಳೆ ವೈವಿಧ್ಯೀಕರಣ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣ ಅಭಿವೃದ್ಧಿ, ನೀರಿನ ಸಮರ್ಥ ಬಳಕೆ ಇನ್ನಿತರ ಯಾವುದಾದರೂ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಮತ್ತು ಕೃಷಿಯತ್ತ ಆಕರ್ಷಿಸಲು ಪ್ರತ್ಯೇಕವಾಗಿ ರೈತ ಮಹಿಳೆಯರಿಂದಲೂ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆತ್ಮ ಯೋಜನೆಯಡಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ, ಆಧುನಿಕ ಯಂತ್ರೋಪಕರಣ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹಸಿರು ಮನೆ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಸಾಕಾಣಿಕೆ ಇತ್ಯಾದಿ ಕೃಷಿ ಚಟುವಟಿಕೆಗಳಲ್ಲಿ ಸಾಧನೆ ಮಾಡಿದವರು ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ರೈತರು ಮತ್ತು ರೈತ ಮಹಿಳೆಯರು ಅರ್ಜಿಗಳನ್ನು ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಜುಲೈ 25ರೊಳಗಾಗಿ ಸಂಬಂಧಿಸಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು. ಈಗಾಗಲೇ ಪ್ರಶಸ್ತಿ ಪಡೆದ ರೈತರು ಪುನಃ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ಸಹಾಯಕ ಕೃಷಿ ನಿರ್ದೇಶಕರು ಅಥವಾ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಕೆ. ಮಧುಸೂಧನ್ ತಿಳಿಸಿದ್ದಾರೆ.