ಚಾಮರಾಜನಗರ: ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ರಾಸಾಯನಿಕಯುಕ್ತ ಬೆಳೆಗಳಿಂದ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಸಹಜ ಬೇಸಾಯದತ್ತ ಮುಖ ಮಾಡಬೇಕು ಎಂಬ ಕೂಗು ರೈತ ದಸರಾದಲ್ಲಿ ಮಾರ್ದನಿಸಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಚೆಲುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಲವು ರೈತ ಮುಖಂಡರು, ಸಹಜ ಬೇಸಾಯ ಅಥವಾ ಸಾವಯವ ಕೃಷಿಯತ್ತಾ ರೈತರು ಮುಖಮಾಡಬೇಕು ಎಂಬ ಸಂದೇಶವನ್ನು ಸಾರಿದರು.
ರೈತರು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡಬೇಕು. ಸರ್ಕಾರಗಳು ಕೂಡ ರೈತರ ಸಮಸ್ಯೆಗಳನ್ನು ಈಡೇರಿಸಬೇಕು. ಬೆಳೆನಷ್ಟ, ಕಾಡುಪ್ರಾಣಿಗಳ ಹಾವಳಿ ಹಾಗೂ ಇನ್ನಿತರೆ ರೈತರ ಸಮಸ್ಯೆಗಳನ್ನು ಜಿಲ್ಲಾಡಳಿತ ಬಗೆಹರಿಸಬೇಕು ಎಂಬ ಒತ್ತಾಯವೂ ಕೇಳಿಬಂದಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷತೆ ವಹಿಸಿ ಎಂಎಸ್‌ಐಎಲ್ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಹಿಂದಿನಂತೆ ಈಗ ಬೇಸಾಯ ಮಾಡುತ್ತಿಲ್ಲ. ರೈತರು ರಾಸಾಯನಿಕಗಳನ್ನು ಬಳಕೆ ಮಾಡುವುದು ಹೆಚ್ಚಾಗಿದೆ. ಅವೈಜ್ಞಾನಿಕ ವ್ಯವಸಾಯ ಮಾಡುವುದರಿಂದ, ಹಿಂಗಾರು-ಮುಂಗಾರಿನ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದೇ ರೈತರ ಬೆಳೆಗಳು ನಾಶವಾಗುತ್ತಿದೆ. ಅತಿವೃಷ್ಟಿ, ಅನಾವೃಷ್ಟಿಯಾದಾಗ ರೈತರಿಗೆ ಕೇಂದ್ರ ಸರ್ಕಾರ ಸೂಕ್ತ ಬೆಳೆ ಪರಿಹಾರವನ್ನು ನೀಡುತ್ತಿಲ್ಲ. ಪ್ರಸ್ತುತ ಸಂದರ್ಭದಲ್ಲಿ ಬೇಸಾಯ ಮಾಡುವುದು ತುಂಬಾ ಕಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರು ಸಮಗ್ರ ಕೃಷಿಯತ್ತ ಮುಖಮಾಡಬೇಕು. ಬೆಳೆಗಳಿಗೆ ಔಷಧಿ ಮತ್ತು ರಸಗೊಬ್ಬರಗಳನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಬೇಕು. ವೈಜ್ಞಾನಿಕತೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡು ವ್ಯವಸಾಯ ಮಾಡುವುದನ್ನು ರೈತರು ಅನುಸರಿಸಬೇಕು ಎಂದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ಮೈಸೂರು ಭಾಗದವರಿಗೆ ದಸರಾ ಬಹುದೊಡ್ಡ ಹಬ್ಬವಾಗಿದೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಮಹಿಳಾ ದಸರಾ, ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ, ಯುವ ದಸರಾ ಹಾಗೂ ರೈತ ದಸರಾವನ್ನು ಆಯೋಜಿಸಲಾಗಿದೆ. ನಾನು ಕೂಡ ರೈತ ಕುಟುಂಬದಿಂದ ಬಂದಿದ್ದೇನೆ. ರೈತನ ಬೆನ್ನೆಲುಬು ಕುಗ್ಗಿದರೇ ದೇಶವೇ ಕುಗ್ಗಿದಂತೆ ಎಂದರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ), ನಗರಸಭಾ ಉಪಾಧ್ಯಕ್ಷೆ ಮಮತಾ ಬಾಲಸುಬ್ರಹ್ಮಣ್ಯಂ, ಸದಸ್ಯ ಅಬ್ರಾರ್ ಅಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡ್ಾ.ಬಿ.ಟಿ.ಕವಿತಾ, ಸಂಪತ್ ಗುಂದಗೆರೆ, ವೀರಪ್ಪ, ಹೊನ್ನೂರು ಬಸವಣ್ಣ, ಶಿವಪುರ ಮಹದೇವಪ್ಪ, ಅಮ್ಜಿತ್ ಖಾನ್, ಅಣಗಳ್ಳಿ ಬಸವರಾಜ್ , ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ರಾಘವೇಂದ್ರ ನಾಯ್ಡು, ಸದಸ್ಯ ಶಾಂತಪ್ಪ, ಸಿದ್ದರಾಜು, ಬಸವರಾಜ್, ಗಿರೀಶ್ ಹಾಗೂ ಇತರರು ಉಪಸ್ಥಿತರಿದ್ದರು.