ಜಿಲ್ಲೆ

ಸಂಸ್ಕೃತದಿಂದ ಸಂಸ್ಕಾರಯುತ ಬದುಕು ಸಾಧ್ಯ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಸಂಸ್ಕೃತ ಭಾಷೆಯನ್ನು ಕಲಿಯುವ ಮೂಲಕ ಸಂಸ್ಕಾರಯುತ ಬದುಕು ಸಾಧ್ಯವಾಗುತ್ತದೆ ಎಂದು ಗುಂಡೇಗಾಲ ಪಟ್ಟದ ಮಠಾಧ್ಯಕ್ಷ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಲ್ಲಿರುವ ಶ್ರೀಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದಶನಾಲಯ ಹಾಗೂ ಶ್ರೀ ಮಹದೇಶ್ವರ ಸಂಸ್ಕೃತ ಪಾಠಶಾಲೆ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಸ್ಮಾಕಂ ಸಂಸ್ಕೃತಮ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಸಂಸ್ಕಾರವಂತನಾಗಬೇಕಾದರೆ ಸಂಸ್ಕೃತ ಭಾಷೆ ಕಲಿಯಬೇಕು. ದೇವರ ಧ್ಯಾನದಿಂದ ದಿನವನ್ನು ಪ್ರಾರಂಭಿಸಿ, ದಿನದ ಮುಕ್ತಾಯದವರೆಗೂ ಅನೇಕ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಾರೆ. ಈ ನಡುವೆ ಧ್ಯಾನ, ಯೋಗ, ವಿದ್ಯಾಭ್ಯಾಸ ಇವುಗಳಲ್ಲಿ ಆಸಕ್ತಿ ಮೂಡಬೇಕಾದರೆ ಸಂಸ್ಕೃತ ಭಾಷೆ ಮತ್ತು ಜ್ಞಾನದ ಅರಿವು ಅತಿ ಅವಶ್ಯಕವಾಗಿದೆ ಎಂದರು.
ಮೈಸೂರು ವಿಭಾಗದ ಸಂಸ್ಕೃತ ವಿಷಯ ಪರಿವೀಕ್ಷಕ ಮಲ್ಲಣ್ಣ ಮಾತನಾಡಿ, ಮಾತೃಭಾಷೆಯಲ್ಲಿ ಸಂಸ್ಕೃತದ ಶೇ.60 ರಿಂದ 70 ಭಾಗ ಪದಗಳ ಬಳಕೆ ಇದೆ. ಇದರ ಅರಿವು ನಮ್ಮ ಗಮನಕ್ಕೆ ಬಂದಿಲ್ಲ. ಆದರೆ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯನ್ನು ದೇವಭಾಷೆ ಎಂದು ಕರೆಯುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸಂಸ್ಕೃತ ಶಿಕ್ಷಕ ಎಚ್.ಎಂ.ಗುರುಸ್ವಾಮಿ, ಶ್ರೀಮಹದೇಶ್ವರ ಶಿಕ್ಷಣ ಸಂಸ್ಥೆಗಳ ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ. ಶಿವಮಲ್ಲಪ್ಪ, ಪ್ರಾಂಶುಪಾಲ ಜಿ.ಶಿವಸ್ವಾಮಿ, ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಎಂ.ಸುದೀಪ್ ಕುಮಾರ, ಗ್ರಾಪಂ ಸದಸ್ಯರಾದ ಎಚ್.ಮಹೇಶ್, ಪುಷ್ಪಲತಾ ಬಸವರಾಜು ಇತರರು ಭಾಗವಹಿಸಿದ್ದರು.