ಜಿಲ್ಲೆ

ಎಲ್ಲ ಫಲಾನುಭವಿಗಳಿಗೂ ಬೆಳೆ ವಿಮೆ ಪಾವತಿಯಾಗಲಿ

ಕಿರಣ್ ಮಾದರಹಳ್ಳಿ

ಗುಂಡ್ಲುಪೇಟೆ: ರೈತ ಸಂಘ ಪ್ರತಿಭಟನೆ ಆರಂಭಿಸಿದ ನಂತರ ಜಿಲ್ಲಾಡಳಿತ ರೈತರ ಮೂರು ಬೇಡಿಕೆಗಳನ್ನು ಭಾಗಶಃ ಈಡೇರಿಸಿದ್ದು, ಉಳಿದ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕ್ರಮಕೈಗೊಳ್ಳಬೇಕು ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಒತ್ತಾಯಿಸಿದರು.

ತಾಲೂಕು ಕಚೇರಿ ಎದುರು ಶುಕ್ರವಾರ ಪ್ರತಿಭಟನಾ ಸ್ಥಳದಲ್ಲಿ ಅವರು ಮಾತನಾಡಿ, ಸಂಘವು ಬಾಳೆ ಬೆಳೆಗೆ ಪರಿಹಾರ ನೀಡುವುದು, 2023-24ನೇ ಸಾಲಿನ ಬೆಳೆ ವಿಮೆ ಹಾಗೂ ಹುತ್ತೂರಿನಿಂದ ಮುಂದಿನ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಳ್ಳಲಾಗಿದೆ. ಪೂರ್ವ ಮುಂಗಾರಿನಲ್ಲಿ 589, ಹಿಂಗಾರಿನಲ್ಲಿ 189 ರೈತರು ಬೆಳೆ ವಿಮೆಗೆ ಹಣ ಕಟ್ಟಿದ್ದಾರೆ. ಹಿಂದೆ ರೈತ ಸಂಘವು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದಾಗ ಕೇವಲ 489 ಜನರಿಗೆ ಮಾತ್ರ ಪರಿಹಾರ ನೀಡಲಾಗಿತ್ತು. ಸದ್ಯ ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡ ನಂತರ 1,883 ಜನರ ಖಾತೆಗೆ ಬೆಳೆವಿಮೆ ಹಣ ಜಮೆ ಮಾಡಿದ್ದಾರೆ. ಅದರಲ್ಲಿ ಇನ್ನೂ 3,320 ಜನರಿಗೆ 7 ವರ್ಷದ ಇಳುವರಿ ಆಧಾರದ ಮೇಲೆ ವಿಮೆಹಣ ಪಾವತಿಸಬೇಕಾಗಿದೆ ಎಂದರು.

ಬಾಳೆ ಬೆಳೆ ನಷ್ಟಕ್ಕೊಳಗಾದ 1,231 ರೈತರಿಗೆ 1.41 ಕೋಟಿ ರೂ.ಪರಿಹಾರ ನೀಡಬೇಕಾಗಿದ್ದು 1,522 ಫಲಾನುಭವಿಗಳಲ್ಲಿ ಕೆಲವರ ಬ್ಯಾಂಕ್ ಖಾತೆಗೆ ಮಾತ್ರ ಹಣ ಜಮೆ ಮಾಡುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಮಹೇಶ್ ಭೇಟಿ ನೀಡಿ ಪರಿಹಾರ ನೀಡುವ ಬಗ್ಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ಆದರೂ ಎಲ್ಲ ಫಲಾನುಭವಿಗಳ ಖಾತೆಗೆ ಪರಿಹಾರದ ಹಣ ಜಮೆ ಮಾಡಿರುವ ಬಗ್ಗೆ ಲಿಖಿತ ದಾಖಲೆ ನೀಡಬೇಕು. ಕೆರೆಗಳಿಗೆ ನದಿ ಮೂಲದಿಂದ ನೀರು ತುಂಬಿಸಬೇಕು. ಅಲ್ಲಿಯವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ತಿಳಿಸಿದರು. ತಾಲೂಕು ಅಧ್ಯಕ್ಷ ದಿಲೀಪ್, ಮಾಜಿ ಅಧ್ಯಕ್ಷ ಶಿವಮಲ್ಲು, ಹಂಗಳ ಮಾಧು ಇತರರಿದ್ದರು.