oppo_2 
ಜಿಲ್ಲೆ

ವಸತಿ ಪ್ರದೇಶಗಳ ಸರ್ವೇಗೆ ಸಹಕಾರ ನೀಡಿ

ಕಿರಣ್ ಮಾದರಹಳ್ಳಿ

ಹನೂರು: ಇ- ಸ್ವತ್ತು ಸಮಸ್ಯೆಯಿಂದ ಮುಕ್ತಿ ಹೊಂದಲು ಹಾಗೂ ಪ್ರತಿಯೊಬ್ಬರೂ ನಿಖರವಾದ ದಾಖಲೆಗಳನ್ನು ಹೊಂದುವ ಸಲುವಾಗಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಸರ್ವೇ ಮಾಡಿಸುವ ಸ್ವಾಮಿತ್ವ ಯೋಜನೆ ಜಾರಿಗೆ ತರಲಾಗಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ ಅತ್ಯಗತ್ಯ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಭೂ ಮಾಪನ ಇಲಾಖೆ ಹಾಗೂ ಗ್ರಾಪಂ ವತಿಯಿಂದ ವಿನೂತನ ಸ್ವಾಮಿತ್ವ ಯೋಜನೆಯ ಅನುಷ್ಠಾನ ಸಂಬಂಧ ಆಯೋಜಿಸಿದ್ದ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಕಂದಾಯ ಇಲಾಖೆ ತೆರಿಗೆಯನ್ನು ವಸೂಲು ಮಾಡುವ ಸಲುವಾಗಿ ವಸತಿ ಪ್ರದೇಶಗಳನ್ನು ಗುರುತಿಸಿ ದಾಖಲಿಸಿತ್ತು. ಆದರೆ, ಆಯಾ ಗ್ರಾಮ ಠಾಣಾ ವ್ಯಾಪ್ತಿಯ ವಸತಿ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಿ ಸರ್ವೇ ಕಾರ್ಯ ನಡೆಸಿ ನಿಖರವಾದ ದಾಖಲೆಗಳನ್ನು ಸಂಗ್ರಹಿಸಿರಲಿಲ್ಲ. ಬಳಿಕ ಇ-ಸ್ವತ್ತು ಮೂಲಕ ನಿಖರ ಆಸ್ತಿ ವಿವರವನ್ನು ಹೊಂದುವಂತಾಗಿತ್ತು. ಆದರೂ, ಇದರಿಂದ ಜನರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದರಿಂದ ಆಸ್ತಿ ಬದಲಾವಣೆ ಹಾಗೂ ಸರ್ಕಾರದಿಂದ ಸಿಗುವ ಸಲವತ್ತುಗಳನ್ನು ಪಡೆದುಕೊಳ್ಳಲು ತುಂಬ ಸಮಸ್ಯೆಯಾಗಿತ್ತು. ಹಾಗಾಗಿ ಇ-ಸ್ವತ್ತಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ವಿನೂತನ ಸ್ವಾಮಿತ್ವ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಹೆಚ್ಚು ಸಮಸ್ಯೆಯಿರುವ ತಾಲೂಕಿನ ಅಜ್ಜೀಪುರ ಹಾಗೂ ಕೌದಳ್ಳಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮಗಳಿಗೂ ವಿಸ್ತರಿಸಲಾಗುವುದು. ಈ ಯೋಜನೆಯಡಿ ವಸತಿ ಪ್ರದೇಶಗಳನ್ನು ಡ್ರೋನ್ ಮೂಲಕ ಕಂದಾಯ ಹಾಗೂ ಗ್ರಾಪಂ ಸಿಬ್ಬಂದಿ ತಂಡದಿಂದ ಸರ್ವೇ ಕಾರ್ಯ ನಡೆಸಲಾಗುತ್ತದೆ. ಆದ್ದರಿಂದ ಈ ವೇಳೆ ಪ್ರತಿಯೊಬ್ಬರೂ ಸ್ಥಳದಲ್ಲಿದ್ದು ಅಗತ್ಯ ಮಾಹಿತಿ ನೀಡುವುದರ ಮೂಲಕ ಸಹಕಾರ ನೀಡಬೇಕು. ಇದರಿಂದ ಸಂಪೂರ್ಣ ಆಸ್ತಿ ವಿವರವನ್ನು ಹೊಂದಿದ ನಿಖರ ದಾಖಲೆಯುಳ್ಳ ಪಿಆರ್ ಕಾರ್ಡ್ ನೀಡಲಾಗುತ್ತದೆ. ಇದು ಶಾಶ್ವತ ದಾಖಲೆಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನ ಪಡೆದುಕೊಂಡು ನಿಖರ ದಾಖಲೆ ಹೊಂದಬಹುದಾಗಿದೆ. ಜತೆಗೆ ಮುಂದಿನ ದಿನಗಳಲ್ಲಿ ಮರು ಸರ್ವೇ ಕಾರ್ಯವನ್ನು ಸಹ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಭೂ ಮಾಪನ ಇಲಾಖೆಯ ಉಪ ನಿರ್ದೇಶಕಿ ವಿದ್ಯಾರಾಣಿ ಮಾತನಾಡಿ, ಚಾ.ನಗರ ತಾಲೂಕಿನಲ್ಲಿ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಇದೀಗ ಪ್ರಥಮ ಬಾರಿಗೆ ಹನೂರು ತಾಲೂಕಿನಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆಯು ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷ ರುದ್ರನಾಯ್ಕ, ಉಪಾಧ್ಯಕ್ಷ ಪ್ರಭುಸ್ವಾಮಿ, ಸದಸ್ಯರಾದ ಚಂದ್ರಮೌಳಿ, ಸೈಯದ್ ಜಬ್ಬರ್, ರಾಜೇಂದ್ರ, ಮಹದೇವ, ಕೃಷ್ಣಮೂರ್ತಿ, ಶಿವಮೂರ್ತಿ, ರುಕ್ಮಿಣಿ, ಗೀತಾ, ತಾಪಂ ಇಒ ಉಮೇಶ್, ಭೂಪನ ಇಲಾಖೆ ಸಹಾಯಕ ನಿರ್ದೇಶಕ ನಟರಾಜು, ಚೇತನ್, ಪಿಡಿಒ ನಂದೀಶ್, ಕಾರ್ಯದರ್ಶಿ ದಾಸ ಇದ್ದರು.