ಜಿಲ್ಲೆ

ಫಲಾನುಭವಿಗಳಿಗೆ ಅನ್ನಭಾಗ್ಯ ಹಣ ತಲುಪಿಸಿ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಕ್ಷೇತ್ರಗಳಿಗೆ ಭೇಟಿ ನೀಡದೆ ನಿದ್ರೆ ಮಾಡುತ್ತಿದ್ದೀರಾ, ಜನರ ಸಮಸ್ಯೆ ಕೇಳುತ್ತಿದ್ದೀರಾ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಮೈಸೂರು ವಿಭಾಗದ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಅವರು. ನಿರ್ಲಕ್ಷೃ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.

ನಗರದ ಹಳೇ ಕೆಡಿಪಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ದೂರುಗಳಿದ್ದರೆ ತಿಳಿಸುವಂತೆ ಲಾನುಭವಿಗಳಿಗೆ ನಿರ್ದೇಶನ ನೀಡಿದರು.

ಈ ವೇಳೆ ಕೋಡಿಮೋಳೆ ಗ್ರಾಮದ ಶುಭಾಮಣಿ ಮಾತನಾಡಿ, ನಮ್ಮೂರಿನ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ. ಸರಿಯಾದ ಸಮಯಕ್ಕೆ ಪಡಿತರ ನೀಡುತ್ತಿಲ್ಲ ಎಂದು ಆರೋಪಿಸಿದರು. ಭೈರಲಿಂಗಸ್ವಾಮಿ ಮಾತನಾಡಿ, ದೊಡ್ಡರಾಯಪೇಟೆಯಲ್ಲಿ ಚೀಟಿ ಕೊಟ್ಟು ಇನ್ನೂ ಪಡಿತರ ನೀಡಿಲ್ಲ ಎಂದು ದೂರಿದರು. ಯೋಜನೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದರಾಜು ಮಾತನಾಡಿ, ಹನೂರಿನಲ್ಲಿ ಪಡಿತರ ನೀಡಲು 10 ರೂ. ಸಂಗ್ರಹ ಮಾಡುತ್ತಿದ್ದಾರೆ ಎಂದು ಹೇಳಿದರು.

ಈ ವಿಷಯ ಕೇಳಿ ಗರಂ ಆದ ಪುಷ್ಪಾ ಅಮರನಾಥ್ ಮೊದಲಿಗೆ ಕೋಡಿಮೊಳೆ ನ್ಯಾಯಬೆಲೆ ಅಂಗಡಿಯ ವಿಚಾರದಲ್ಲಿ ಕೇಳಿ ಬಂದಿರುವ ಆರೋಪಕ್ಕೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಆಹಾರ ನಿರೀಕ್ಷಕ ದಿನಕರ್ ಅವರನ್ನು ತರಾಟೆಗೆ ತೆಗೆದುಕೊಂಡರು. ನೀವು ಫೀಲ್ಡ್‌ಗೆ ಹೋಗುತ್ತಿದ್ದೀರಾ, ನಿದ್ರೆ ಮಾಡುತ್ತಿದ್ದೀರಾ? ಎಂದು ಸಿಟ್ಟಾದರು. ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆ ತುಂಬಿಸುವ ಒಳ್ಳೆಯ ಕಾರ್ಯಕ್ರಮ. ಇದನ್ನು ಹುಡುಗಾಟ ಎಂದುಕೊಂಡಿದ್ದೀರಾ. ದಿನಕರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಜಿಪಂ ಸಿಇಒ ಮೋನಾ ರೋತ್‌ಗೆ ಸೂಚನೆ ನೀಡಿದರು.

ಅನ್ನಭಾಗ್ಯ ಕೊಡಿ
ಅನ್ನಭಾಗ್ಯ ಯೋಜನೆಯ ಪ್ರಗತಿ ಪರಿಶೀಲನೆ ವೇಳೆ ಸಾವಿರಾರು ಫಲಾನುಭವಿಗಳಿಗೆ ಇನ್ನೂ ಹಣ ತಲುಪಿಲ್ಲ ಎಂಬ ಮಾಹಿತಿ ತಿಳಿಯಿತು. ಈ ವಿಷಯ ಸಂಬಂಧ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರೂ ಹಸಿವಿನಿಂದ ಇರಬಾರದು ಎಂದು ಅನ್ನಭಾಗ್ಯ ಯೋಜನೆ ಜಾರಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟು ಜನರಿಗೆ ಯೋಜನೆ ತಲುಪಿಲ್ಲ ಎಂದು ಕೇಳಿ ನನ್ನ ಹೊಟ್ಟೆ ಉರಿಯುತ್ತಿದೆ. 15 ದಿನದೊಳಗೆ ಅಷ್ಟೂ ಜನರಿಗೆ ಸೌಲಭ್ಯ ತಲುಪುವಂತೆ ಮಾಡಿ ಎಂದು ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರ ಸಮಿತಿ ಸದಸ್ಯರು ಮತ್ತು ಲಾನುಭವಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ಮೊದಲ ಸ್ಥಾನ
ಗೃಹಲಕ್ಷ್ಮೀ ಯೋಜನೆಯ ಅನುಷ್ಠಾನದಲ್ಲಿ ಚಾಮರಾಜನಗರ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿರುವುದಕ್ಕೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಅಧಿಕಾರಿಗಳನ್ನು ಶ್ಲಾಸಿದರು.
ಚಾಮರಾಜನಗರ ಶೇ.98.51, ಹಾವೇರಿ ಶೇ.97.32, ಗದಗ ಶೇ.97.06, ಕೊಪ್ಪಳ ಶೇ.96.70 ಗುರಿ ತಲುಪಿವೆ. ಈ ಮಧ್ಯೆ ಗೃಹಲಕ್ಷ್ಮೀ ಯೋಜನೆಯ ಕುರಿತು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಸದಸ್ಯ ಚಿನ್ನಸ್ವಾಮಿ ಮಾತನಾಡಿ, ಕರಿಯನಕಟ್ಟೆಯಲ್ಲಿ ಇಬ್ಬರು ವಿಧವೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿಲ್ಲ. ಈ ಕುರಿತು ಸಿಡಿಪಿಒಗೆ ತಿಳಿಸಿದರೂ ಏನೂ ಪ್ರಯೋಜವಾಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ ಅಮರನಾಥ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮಂಜುನಾಥ್‌ಗೆ ತಕ್ಷಣ ಸಮಸ್ಯೆ ಬಗೆಹರಿಸುವಂತೆ ನಿರ್ದೇಶನ ನೀಡಿದರು.

‘ಯುವನಿಧಿ’ ನೀರಸ ಪ್ರತಿಕ್ರಿಯೆಗೆ ಬೇಸರ
ಜಿಲ್ಲೆಯಲ್ಲಿ ಯುವನಿಧಿ ಯೋಜನೆ ಅನುಷ್ಠಾನದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ. ಚಾಮರಾಜನಗರ ತಾಲೂಕಿನಲ್ಲಿ 797, ಗುಂಡ್ಲುಪೇಟೆ ತಾಲೂಕಿನಲ್ಲಿ 503, ಹನೂರು ತಾಲೂಕಿನಲ್ಲಿ 305, ಕೊಳ್ಳೇಗಾಲ ತಾಲೂಕಿನಲ್ಲಿ 391, ಯಳಂದೂರು ತಾಲೂಕಿನಲ್ಲಿ 173 ಸೇರಿ ಒಟ್ಟು 2175 ಜನರು ಯೋಜನೆಗೆ ನೋಂದಣಿಯಾಗಿದ್ದಾರೆ. ಕೇವಲ 2 ಸಾವಿರ ಜನರು ನೊಂದಣಿ ಮಾಡಿಸಿರುವ ಮಾಹಿತಿ ತಿಳಿದ ಪುಷ್ಪಾ ಅಮರನಾಥ್ ಯುವನಿಧಿ ಯೋಜನೆ ಕುರಿತು ವ್ಯಾಪಕ ಪ್ರಚಾರ ಮಾಡಿ ಎಂದು ಸಲಹೆ ನೀಡಿದರು.

ಶಕ್ತಿ, ಗೃಹಜ್ಯೋತಿ
ಶಕ್ತಿ ಯೋಜನೆಯಡಿ 2023ರ ಜೂನ್‌ನಿಂದ 2024ರ ಆಗಸ್ಟ್‌ವರೆಗೆ ಒಟ್ಟು 6,27,27,062 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿ 2,65,911 ಗ್ರಾಹಕರ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನ್ಯಾಯ ಬೆಲೆ ಅಂಗಡಿಯಲ್ಲಿ ನ್ಯಾಯವಾದ ತೂಕ ಸಿಗುತ್ತಿಲ್ಲ. ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆದಿರುವ ಪಡಿತರದಾರರ ಹೆಸರು ಮತ್ತು ಅವರಿಗೆ ಎಷ್ಟು ಕೆಜಿ ಅಕ್ಕಿ ಕೊಡಲಾಗಿದೆ ಎಂಬ ಪಟ್ಟಿಯನ್ನು ಪ್ರದರ್ಶನ ಮಾಡಬೇಕು.ಹೊಂಗನೂರು ಚಂದ್ರು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ, ಚಾಮರಾಜನಗರ