ಜಿಲ್ಲೆ

ಹರದನಹಳ್ಳಿ ಜನಸಂಪರ್ಕ ಸಭೆಯಲ್ಲಿ ದೂರು

ಕಿರಣ್ ಮಾದರಹಳ್ಳಿ

ಚಾಮರಾಜನಗರ:ತಾಲೂಕಿನ ಚಂದಕವಾಡಿ ಹೋಬಳಿಗೆ ಸೇರಿದ ಹೊನ್ನೇಗೌಡನ ಹಳ್ಳಿ ಗ್ರಾಮದ ಜನರಿಗೆ 20 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದಾರೆ ಎಂದು ಗ್ರಾಮದ ಮುಖಂಡ ಬಿ.ಮಹೇಶ್ ಅಧಿಕಾರಿಗಳಿಗೆ ದೂರು ನೀಡಿದರು.

ಹರದನಹಳ್ಳಿ ಗ್ರಾಮದಲ್ಲಿ ಇರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಉಪ ವಿಭಾಗ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು. ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ 14 ಕುಟುಂಬಗಳು ವಾಸಿಸುತ್ತಿವೆ. ರೈತರು ವ್ಯವಸಾಯ ಮಾಡಲು ಬಾವಿಯಲ್ಲಿ ನೀರಿದ್ದರೂ ಕೂಡ ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.

ರಾತ್ರಿ ವೇಳೆ ಕಾಡು ಪ್ರಾಣಿಗಳಿಂದ ಬೆಳೆದ ಸಲು ಸಹ ಹಾಳಾಗುತ್ತಿದೆ, ನಾಲ್ಕಾರು ಮನೆಗಳಿಗೆ ಮಾತ್ರ ಸೋಲಾರ್ ವ್ಯವಸ್ಥೆ ಇದ್ದು ಯುಪಿಎಸ್ ಬಳಸಲಾಗುತ್ತಿದೆ. ಆದ್ದರಿಂದ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ವಿದ್ಯುತ್ ಲೈನ್ ಎಳೆಯಬೇಕೆಂದು ಒತ್ತಾಯಿಸಿದರು.

ಇದಕ್ಕೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವಿಭಾಗ ಕಚೇರಿಯ ಕಾರ್ಯಪಾಲಕ ಎಂಜಿನಿಯರ್ ಪ್ರದೀಪ್ ಮಾತನಾಡಿ, ಎರಡು ಮೂರು ದಿನಗಳಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮುಖಂಡ ಶಿವಮೂರ್ತಿ ಮಾತನಾಡಿ, ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆ ಹಾಕಲಾಗಿದ್ದು, ನೀರಿಲ್ಲದೆ ಒಣಗುತ್ತಿದೆ. ಈಗ 16 ಜನ ಸರ್ವಿಸ್ ಪಡೆದಿದ್ದು, ವೋಲ್ಟೇಜ್ ಕಡಿಮೆಯಾಗಿದೆ. ಆದ್ದರಿಂದ 25 ಕೆ.ವಿ ಸರ್ವಿಸ್ ಸ್ಟೇಷನ್ ಸ್ಥಾಪಿಸುವಂತೆ ಮನವಿ ಮಾಡಿದರು. ದೊಡ್ಡಮೋಳೆ ಸಿದ್ದಶೆಟ್ಟಿ, ಹರದನಹಳ್ಳಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದ್ರುಪದ್, ಸಹಾಯಕ ಇಂಜಿನಿಯರ್‌ಗಳಾದ ರವಿಕುಮಾರ್, ವಸಂತ್, ಕುಮಾರ್, ಸತೀಶ್, ವೃತೇಶ್, ನವೀನ್, ಹಿರಿಯ ಲೆಕ್ಕ ಸಹಾಯಕ ಮಹದೇವಸ್ವಾಮಿ ಇದ್ದರು.