ಹನೂರು: ಸಂಸ್ಕೃತ ಭಾಷೆ ಸಂಸ್ಕಾರವನ್ನು ಕಲಿಸುವುದರ ಜತೆಗೆ ಸುಸಂಬದ್ಧ ಜೀವನವನ್ನು ರೂಪುಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಸಂಸ್ಕೃತ ಭಾಷೆ ಕಲಿಯುವಂತಾಗಬೇಕು ಎಂದು ಡಾ. ಶ್ರೀ ಫಲಹಾರ ಪ್ರಭುದೇವ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಬಂಡಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರು ಹಾಗೂ ಶ್ರೀ ಫಲಹಾರ ಪ್ರಭುದೇವ ಸಂಸ್ಕೃತ ಪಾಠಶಾಲೆ ವತಿಯಿಂದ ಆಯೋಜಿಸಿದ್ದ ಆಸ್ಮಾಕಂ ಸಂಸ್ಕೃತಂ ಸಂಸ್ಕೃತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತ ಭಾಷೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಭಾಷಾ ಕಲಿಕೆಯಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ. ವಿಚಾರವಂತಿಕೆ ಬೆಳೆಯುತ್ತದೆ. ಶಿಸ್ತುಬದ್ಧತೆಯನ್ನು ಕಲಿಸುವುದರ ಜತೆಗೆ ಸಂಸ್ಕಾರಯುತ ಜೀವನಕ್ಕೆ ಸಹಕಾರಿಯಾಗಿದೆ. ಆದರೆ, ಈ ಭಾಗದಲ್ಲಿ ಸಂಸ್ಕೃತ ಕಲಿಯುವವರ ಸಂಖ್ಯೆ ಕಡಿಮೆ. ಆದ್ದರಿಂದ ಪ್ರತಿಯೊಬ್ಬರೂ ಸಂಸ್ಕೃತ ಭಾಷಾ ಕಲಿಕೆಗೆ ಗಮನಹರಿಸಬೇಕು. ಈ ದೆಸೆಯಲ್ಲಿ ಗ್ರಾಮದ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ ಎಂದು ತಿಳಿಸಿದರು.
ಮೈಸೂರು ವಿಭಾಗೀಯ ಸಂಸ್ಕೃತ ವಿಷಯ ಪರಿವೀಕ್ಷಕ ಮಲ್ಲಣ್ಣ ಮಾತನಾಡಿ, ಕನ್ನಡ ಭಾಷೆಯು ಸುಮಾರು ಶೇ.60ರಷ್ಟು ಸಂಸ್ಕೃತ ಭಾಷೆಯ ಮಿಳಿತವಾಗಿದೆ. ಈ ಭಾಷೆಯನ್ನು ದೇವವಾಣಿ, ಗಿರಿವಾಣಿ ಎಂತಲೂ ಕರೆಯುವುದರ ಮೂಲಕ ಮಹತ್ವವನ್ನು ಪಡೆದುಕೊಂಡಿದೆ. ಸರ್ವ ಜನನಿ ಸಂಸ್ಕೃತ ಶಿಷ್ಟಾಚಾರದ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಕಲಿಯಬಹುದಾಗಿದೆ. ಕತ್ತಲಿನಲ್ಲಿ ಇರುವವರನ್ನು ಬೆಳಕಿನೆಡೆಗೆ ತರುವ ಶಕ್ತಿ ಈ ಭಾಷೆಗಿದ್ದು, ವಿಶ್ವದಲ್ಲಿಯೇ ವಿಶಿಷ್ಟವಾಗಿದೆ. ಆಧುನಿಕ ಚಲನಚಿತ್ರ ಹಾಗೂ ಬಸವಣ್ಣನವರ ವಚನಗಳಲ್ಲಿ ಸಂಸ್ಕೃತ ಭಾಷೆಯನ್ನು ಬಳಕೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳೊಂದಿಗೆ ಜಾಥಾ ನಡೆಸುವುದರ ಮೂಲಕ ಸಂಸ್ಕೃತ ಭಾಷಾ ಸಂಬಂಧ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹ.ಮ. ಗುರುಸ್ವಾಮಿ, ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪರಶಿವಮೂರ್ತಿ, ಗ್ರಾಪಂ ಸದಸ್ಯ ನಾಗಯ್ಯ, ಎಸ್‌ಡಿಎಂಸಿ ಅಧ್ಯಕ್ಷೆ ಪುಟ್ಟದೇವಮ್ಮ, ಸಂಸ್ಕೃತ ಶಿಕ್ಷಕ ವಿದ್ವಾನ್ ಶಿವರುದ್ರಸ್ವಾಮಿ, ಸಿಆರ್‌ಪಿಗಳಾದ ದೇವರಾಜು, ದೊಡ್ಡಸಿದ್ದಶೆಟ್ಟಿ, ಮುಖಂಡರಾದ ಕುಮಾರ್, ಪ್ರಭುಸ್ವಾಮಿ, ಶಿಕ್ಷಕರು ಇನ್ನಿತರರು ಇದ್ದರು.