ಚಾಮರಾಜನಗರ: ತಾಲೂಕಿನ ಕಮರವಾಡಿ ಗ್ರಾಮದ ಬಳಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ವಾಹನವೊಂದು ಹರಿದು ಒಂದೂವರೆ ವರ್ಷದ ಮಗು ಮೃತಪಟ್ಟಿದೆ.
ಕಮರವಾಡಿ ಗ್ರಾಮದ ನಿವಾಸಿಗಳಾದ ನವೀನ್ ಮತ್ತು ಚೈತ್ರಾ ದಂಪತಿಯ ಪುತ್ರ ಆರ್ಯ ಮೃತ ಮಗು. ಬುಧವಾರ ಸಂತೇಮರಹಳ್ಳಿಯಲ್ಲಿರುವ ಲೋಟಸ್ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿದ ವಾಹನ ಮಕ್ಕಳನ್ನು ಕರೆತರಲು ಕಮರವಾಡಿ ಗ್ರಾಮಕ್ಕೆ ಬಂದಿದೆ. ಈ ವೇಳೆ ಮಕ್ಕಳನ್ನು ಹತ್ತಿಸಿಕೊಂಡು ಚಾಲಕ ವಾಹನವನ್ನು ಹಿಂದಕ್ಕೆ ತೆರೆಯಲು ಹೋದಾಗ ಮನೆಯ ಮುಂದೆ ನಿಂತಿದ್ದ ಆರ್ಯ ಎಂಬ ಮಗುವಿನ ಮೇಲೆ ಹರಿದಿದೆ. ವಾಹನ ಹರಿದ ರಭಸಕ್ಕೆ ಮಗುವಿನ ಮೆದುಳು ತಲೆಯಿಂದ ಹೊರಬಂದಿದ್ದು, ಪರಿಣಾಮವಾಗಿ ಸ್ಥಳದಲ್ಲೇ ಮಗು ಮೃತಪಟ್ಟಿದೆ. ಸಂತೇಮರಹಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನವನ್ನು ವಶಕ್ಕೆ ಪಡೆದಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.