ಜಿಲ್ಲೆ

ತಾಯಿ ಎದೆಹಾಲು ಅಮೃತಕ್ಕೆ ಸಮಾನ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಮಕ್ಕಳಿಗೆ ತಾಯಿ ಎದೆಹಾಲು, ಅಮೃತಕ್ಕೆ ಸಮಾನ, ಅದನ್ನು ತಪ್ಪದೇ ಕುಡಿಸುವುದು ತಾಯಂದಿರ ಮಹತ್ವದ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನುಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಈಶ್ವರ್ ಅಭಿಪ್ರಾಯಪಟ್ಟರು.

ತಾಲೂಕಿನ ಮಾದಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಂಡರಕಳ್ಳಿಮೋಳೆ ಗ್ರಾಮದ ಶಾಲಾವರಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬುಧವಾರ ನಡೆದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಹಾಗೂ ಪ್ರಧಾನಮಂತ್ರಿ ಮಾತೃವಂದನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಬೆಳವಣಿಗೆಗೆ ತಾಯಿ ಎದೆಹಾಲು ಅತ್ಯಂತ ಅಗತ್ಯವಾಗಿ ಬೇಕು. ಇದರಲ್ಲಿ ಸಾಕಷ್ಟು ಪೌಷ್ಠಿಕಾಂಶವಿದ್ದು, ತಾಯಂದಿರು ಮಕ್ಕಳಿಗೆ ತಪ್ಪದೇ ಕುಡಿಸಬೇಕು. ಇದರಿಂದ ಅವರು ಮುಂದಿನದಿನಗಳಲ್ಲಿ ಆರೋಗ್ಯವಂತರಾಗಿ ಬೆಳೆಯುತ್ತಾರೆ. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳಬೇಕು ಎಂದರು.

ಪ್ರಭಾರ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಮೋನಾರೋತ್ ಮಾತನಾಡಿ, ತಾಯಂದಿರು ತಮ್ಮ ಆರೋಗ್ಯದ ಜತೆಗೆ ಮಕ್ಕಳು ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್, ಗ್ರಾ.ಪಂ ಅಧ್ಯಕ್ಷ ರೂಪೇಶ್, ಸದಸ್ಯರಾದ ಮೋಹನ್ ಕುಮಾರ್, ಸಿದ್ದರಾಜು, ಭುವನೇಶ್ವರಿ, ಜ್ಯೋತಿ, ಶಿವಮ್ಮ, ಪಿಡಿಒ ಭಾಗ್ಯಲಕ್ಷ್ಮಿ, ತೋಟಗಾರಿಕಾ ಇಲಾಖೆಯ ಕೆಂಪರಾಜು, ಡಾ.ಮಮತಾ ಹಾಗೂ ಇತರರು ಹಾಜರಿದ್ದರು.