ಕಿರಣ್ ಮಾದರಹಳ್ಳಿ ಚಾಮರಾಜನಗರ
ಗ್ರಾಮೀಣ ಭಾಗದ ಸಾರಿಗೆ ಸಂಚಾರ ನರಕದಲ್ಲಿ ವಿಹಾರವಾಗಿಬಿಟ್ಟಿದೆ. ಕಸಾಯಿಖಾನೆಗಳಿಗೆ ಸಾಗಿಸುವ ದನಗಳನ್ನು ವಾಹನಗಳಿಗೆ ತುಂಬುವ ರೀತಿ ಜನ ತುಂಬಿದ ಬಸ್ ಓಡಾಡುತ್ತಿದೆ.
ಇದು ಚಾಮರಾಜನಗರದಿಂದ ಯರಗನಹಳ್ಳಿ ಮಾರ್ಗದ ನಿತ್ಯ ಪ್ರಯಾಣಿಸುವ ಪ್ರಯಾಣಿಕರು ಅನುಭವಿಸುತ್ತಿರುವ ಕಿರಿಕಿರಿ. ಚಾಮರಾಜನಗರ- ಸೋಮವಾರಪೇಟೆ- ಹರದನಹಳ್ಳಿ- ಅಮಚವಾಡಿ- ಹೊನ್ನಳ್ಳಿ-ವಡ್ಡಗಲ್ಲಪುರದ ಹುಂಡಿ- ವಡ್ಡಗಲ್ಲಪುರ- ಅರಕಲವಾಡಿ- ಯಾನಗಹಳ್ಳಿ- ಯಣಗುಂಬ-ಯರಗನಹಳ್ಳಿ ಮಾರ್ಗವು ಸುಮಾರು 27 ಕಿಲೋಮೀಟರ್ ಇದೆ. ಇಲ್ಲಿನ ಜನರು ಚಾಮರಾಜನಗರದೊಂದಿಗೆ ಪ್ರತಿದಿನ ವ್ಯಾಪಾರ-ವಹಿವಾಟಿನ ಸಂಪರ್ಕವನ್ನು ಹೊಂದಿದ್ದಾರೆ. ಸರ್ಕಾರಿ ಕಚೇರಿಗಳಿಗೆ, ಆಸ್ಪತ್ರೆಗೆ ಓಡಾಡುವವರಿದ್ದಾರೆ. ಗ್ರಾಮೀಣಭಾಗದ ಬಡಜನರೇ ಹೆಚ್ಚಾಗಿರುವ ಕಾರಣ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡಲು ಬಸ್‌ಗಳನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಶಾಲೆ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯವಿಲ್ಲದೆ ಇದ್ದರೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ. ಈ ಭಾಗದಲ್ಲಿ ಖಾಸಗಿ ಬಸ್‌ಗಳ ಸೌಲಭ್ಯವೂ ಇಲ್ಲ. ಕೋವಿಡ್‌ಗೂ ಮೊದಲು ಖಾಸಗಿ ಬಸ್‌ಗಳು ಓಡಾಡುತ್ತಿದ್ದವು. ಕೋವಿಡ್ ನಂತರ ಖಾಸಗಿ ಬಸ್‌ಗಳ ಸಂಚಾರ ಇಲ್ಲದಂತಾಯಿತು. ಇದರಿಂದಾಗಿ ಸರ್ಕಾರಿ ಬಸ್ ಅನ್ನೇ ಅವಲಂಬಿಸುವಂತಾಗಿದೆ.
ಚಾಮರಾಜನಗರ-ಯರಗನಹಳ್ಳಿ ಮಾರ್ಗದ ರಸ್ತೆಯಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲೆ-ಕಾಲೇಜು ಸಮಯಕ್ಕೆ ಬರುವುದು ಕೇವಲ ಒಂದೇ ಬಸ್. ಚಾಮರಾಜನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಯರಗನಹಳ್ಳಿಗೆ ಸುಮಾರು 7 ಗಂಟೆಗೆ ಬಸ್ ಹೊರಡುತ್ತದೆ. ಸುಮಾರು 8.45ಕ್ಕೆ ಮತ್ತೆ ವಾಪಸ್ ಬರುತ್ತದೆ. ಈ ಸಂದರ್ಭದಲ್ಲಿ ಜನರು ಕಿಕ್ಕಿರಿದು ತುಂಬಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಬಸ್ ಒಳಗೆ ಕಾಲಿಡಲೂ ಜಾಗ ಸಿಗುತ್ತಿಲ್ಲ. ವಿದ್ಯಾರ್ಥಿಗಳೇ ಹೆಚ್ಚಾಗಿ ಪ್ರಯಾಣ ಮಾಡುವುದರಿಂದ ಬಸ್‌ನಲ್ಲಿ ಜಾಗವಿಲ್ಲದ ಸಂದರ್ಭದಲ್ಲಿ ಬಾಗಿಲಿನಲ್ಲಿ ನಿಂತು ಜೋತು ಹಾಕಿಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳು ರಶ್‌ನಲ್ಲಿ ನಿಲ್ಲಲೂ ಆಗದೆ, ಕೂರಲು ಜಾಗವೂ ಇಲ್ಲದೆ ಕಷ್ಟಪಡುತ್ತಿದ್ದಾರೆ. ಸಂಜೆ ವೇಳೆಗೆ ಮತ್ತೆ ಇದೇ ರೀತಿ ಬಸ್ ತುಂಬಿ ತುಳುಕುತ್ತದೆ. ಪ್ರಯಾಸದ ಪ್ರಯಾಣ ಮಾಡುವ ಪ್ರಯಾಣಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ:
ಶಾಲೆ-ಕಾಲೇಜಿಗೆ ತೆರಳುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಿರುವ ತೊಂದರೆ ಒಂದೆರಡಲ್ಲ. ಅವುಗಳಲ್ಲಿ ಬಸ್ ಸೌಲಭ್ಯ ಸಮರ್ಪಕವಾಗಿ ದೊರೆಯದೆ ಇರುವುದೂ ಒಂದು. ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜುಗಳಿಗೆ ತೆರಳಲು ಬಸ್‌ನಲ್ಲಿ ತುಂಬಾ ಜನರು ತುಂಬಿಕೊಂಡಿದ್ದರೂ ಅದಕ್ಕೆ ಹತ್ತಬೇಕು. ಬಸ್ ಹೊರಟು ಹೋದರೆ ತರಗತಿ ಶುರುವಾಗಿ ಅಂದಿನ ಪಾಠ-ಪ್ರವಚನದಿಂದ ವಂಚಿತರಾಗಬೇಕಾಗುತ್ತದೆ. ಚಾಮರಾಜನಗರ-ಯರಗನಹಳ್ಳಿ ಮಾರ್ಗದ ಹಳ್ಳಿಗಳ ವಿದ್ಯಾರ್ಥಿಗಳು ಈ ಸಮಸ್ಯೆ ಅನುಭವಿಸುತ್ತಿದ್ದಾರೆ.
ಚಾಮರಾಜನಗರ-ಯರಗನಹಳ್ಳಿ ಮಾರ್ಗದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಹೆಚ್ಚುವರಿ ಬಸ್ ಸೌಲಭ್ಯವನ್ನು ಒದಗಿಸಿಕೊಡಬೇಕು. ಇಲ್ಲದಿದ್ದರೆ ರಶ್ ಆಗಿರುವ ಬಸ್‌ಗಳಲ್ಲಿ ಪ್ರಯಾಣಿಕರು ಓಡಾಡಲು ಕಷ್ಟವಾಗುತ್ತದೆ. ಬಸ್‌ನ ಬಾಗಿಲಿನ ಬಳಿ ನೇತುಹಾಕಿಕೊಳ್ಳುವ ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಕೆಎಸ್‌ಆರ್‌ಟಿಸಿಯೇ ಹೊಣೆ.ವೈ.ಪಿ.ಮಂಜುನಾಥ್ ಯಣಗುಂಬ, ಚಾಮರಾಜನಗರ
ಚಾಮರಾಜನಗರ-ಯರಗನಹಳ್ಳಿ ಗ್ರಾಮದಲ್ಲಿ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಿಕೊಡಲು ಮನವಿ ಸಲ್ಲಿಸಲಿ. ನಂತರ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು.ಅಶೋಕ್‌ಕುಮಾರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ, ಚಾಮರಾಜನಗರ