ಚಾಮರಾಜನಗರ: ಗುಂಡ್ಲುಪೇಟೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಕಾರ್ ಟೈರ್ ಪಂಕ್ಚರ್ ಆದ ಪರಿಣಾಮ ರಸ್ತೆ ಬದಿಯಲ್ಲಿ ಕುರಿಗಳನ್ನು ಮೇಯಿಸುತ್ತಿದ್ದ ಕುರಿಗಾಹಿಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟು, ಮತ್ತೋರ್ವ ಗಾಯಗೊಂಡಿದ್ದಾನೆ.
ತಾಲೂಕಿನ ಕಡುವಿನಕಟ್ಟೆಹುಂಡಿ ಗ್ರಾಮದ ಚಿನ್ನೇಗೌಡ(71) ಮೃತ ದುರ್ದೈವಿ. ಅದೇ ಗ್ರಾಮದ ಶಿವೇಗೌಡ ಗಾಯಗೊಂಡಿದ್ದಾನೆ. ಕಡುವಿನಕಟ್ಟೆಹುಂಡಿ ಹಾಗೂ ವೀರನ ಪುರ ಕ್ರಾಸ್ ಮಾರ್ಗಮಧ್ಯೆಯ ಮುಖ್ಯರಸ್ತೆ ಬದಿಯಲ್ಲಿ ಭಾನುವಾರ ಚಿನ್ನೇಗೌಡರು ಕುರಿಗಳನ್ನು ಮೇಯಿಸುತ್ತಿದ್ದ ವೇಳೆ ಅವರನ್ನು ಮಾತನಾಡಿಸಲು ಶಿವೇಗೌಡರು ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಬಂದಿದ್ದಾರೆ.
ಈ ವೇಳೆ ಚಾ.ನಗರ ಕಡೆಯಿಂದ ಗುಂಡ್ಲುಪೇಟೆ ಕಡೆಗೆ ಹೋಗುತ್ತಿದ್ದ ಕಾರ್‌ನ ಟೈರ್ ಪಂಕ್ಚರ್ ಆಗಿದ್ದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಚಿನ್ನೇಗೌಡರು ಮೃತಪಟ್ಟಿದ್ದು, ಶಿವೇಗೌಡ ಗಾಯಗೊಂಡು ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.