ಚಾಮರಾಜನಗರ: ಸಂತೇಮರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲ ಪಡೆದವರು ಸಕಾಲಕ್ಕೆ ಮರು ಪಾವತಿ ಮಾಡಿ ಎಂದು ಪಿಎಸಿಸಿ ಅಧ್ಯಕ್ಷ ಆರ್.ಎಸ್.ಪ್ರಸಾದ್ ತಿಳಿಸಿದರು.
ತಾಲೂಕಿನ ಸಂತೇಮರಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ 2023-2024 ನೇ ಸಾಲಿನ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು. ಸಂಘದ ವತಿಯಿಂದ 651 ಸದಸ್ಯರುಗಳಿಗೆ ಸುಮಾರು 8.50 ಕೋಟಿ ರೂ.ಸಾಲ ನೀಡಲಾಗಿದೆ. ಅದನ್ನು ಸರಿಯಾದ ಸಮಯಕ್ಕೆ ಮರು ಪಾವತಿ ಮಾಡಿ. ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದ್ದು, ಇದನ್ನು ಸದುಪಯೋಗ ಪಡೆದುಕೊಳ್ಳಬೇಕು. 2023-2024 ಸಾಲಿನಲ್ಲಿ ಸಂಘಕ್ಕೆ 3.84 ಲಕ್ಷ ಬಂದಿದೆ ಎಂದರು.
ಸದಸ್ಯ ಮಾದೇಶ್ ಮಾತನಾಡಿ, ಕೃಷಿ ಪತ್ತಿನ ಚರ-ಸ್ಥಿರಾಸ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಕೃಷಿ ಪತ್ತಿಗೆ ಕಾಯಂ ವಕೀಲರನ್ನು ನೇಮಕ ಮಾಡಿಕೊಳ್ಳಬೇಕೆಂದು ತಿಳಿಸಲಾಯಿತು. ಸಂಘದ ಉಪಾಧ್ಯಕ್ಷೆ ಸುಮಿತ್ರಾ, ನಿರ್ದೇಶಕರಾದ ಆರ್.ಬಸವಣ್ಣ, ಎಚ್.ಎಂ ಮಹದೇವಪ್ರಭು, ಎಸ್.ರಾಜ, ಮಹದೇವಪ್ರಭು(ಗಣೇಶ್), ಬಿ.ಎಸ್.ಗಿರೀಶ್, ಕೆ.ಪಿ. ಶಿವಸ್ವಾಮಿ, ಶ್ರೀಕಂಠಮೂರ್ತಿ, ರಾಮಸ್ವಾಮಿ, ರಾಜೇಶ್ವರಿ, ವೆಂಕಟೇಶನಾಯಕ, ಕಾರ್ಯನಿರ್ವಹಣಾಧಿಕಾರಿ ಪ್ರದೀಪ್, ಸಿಬ್ಬಂದಿ ಮಹದೇವಪ್ರಸಾದ್, ರಾಚ್ಚಪ್ಪ ಇದ್ದರು.