ಚಾಮರಾಜನಗರ: ಪಡಿತರ ಅಕ್ಕಿಯನ್ನು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಚಾಮರಾಜನಗರ ಪಟ್ಟಣ ಪೊಲೀಸರು ಆರೋಪಿಗಳಿಂದ 32,655 ರೂ. ಮೌಲ್ಯದ 933 ಕೆ.ಜಿ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ವಾಹನ ಚಾಲಕ ಇಮ್ರಾನ್ ಹಾಗೂ ಮಹಮ್ಮದ್ ಸಲ್ಮಾನ್ ಬಂಧಿತರು. ಇವರು ಸೆ. 11ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಪಟ್ಟಣದ ಗಾಳಿಪುರದ ಕಡೆಯಿಂದ ತಿ.ನರಸೀಪುರದ ಕಡೆಗೆ ಹೋಗುತ್ತಿದ್ದ ಟಾಟಾ ಏಸ್ ವಾಹನವನ್ನು ಪರಿಶೀಲಿಸಿದ ವೇಳೆ ಪಡಿತರ ಅಕ್ಕಿ ತುಂಬಿರುವ 19 ಪ್ಲಾಸ್ಟಿಕ್ ಚೀಲಗಳು ಕಂಡುಬಂತು. ಪಡಿತರ ಅಕ್ಕಿಯನ್ನು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿರುವುದಾಗಿ ಆರೋಪಿಗಳಿಂದ ತಿಳಿದ ಮೇರೆಗೆ ಆರೋಪಿತರನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.