ಚಾಮರಾಜನಗರ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2024ನೇ ಸಾಲಿನಲ್ಲಿ ನಾವೀನ್ಯತೆ (ಇನೋವೇಶನ್), ತಾರ್ಕಿಕ ಸಾಧನೆಗಳು, ಕ್ರೀಡೆ, ಕಲೆ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವಂತಹ 5ರಿಂದ 18ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಜಿಲ್ಲಾಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಂತೆ ಒಟ್ಟು 8 ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಪ್ರತಿ ಮಕ್ಕಳಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಮಕ್ಕಳ ವಯೋಮಿತಿಯ ಬಗ್ಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಪ್ರತಿ ಕ್ಷೇತ್ರಕ್ಕೂ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
ಆಸಕ್ತಿಯುಳ್ಳ ಮಕ್ಕಳು ನಿಗದಿಪಡಿಸಿರುವ ಅರ್ಜಿ ನಮೂನೆಯನ್ನು ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 129ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು ಭರ್ತಿ ಮಾಡಿ ಅಕ್ಟೋಬರ್ 10ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.