ಜಿಲ್ಲೆ

ಏಕ ಬಳಕೆಯ ಪ್ಲಾಸ್ಟಿಕ್ ಮಾರಾಟ, ಬಳಕೆ ನಿಷೇಧ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2016ರ ನಿಯಮ 4 (2) ರ ಪ್ರಕಾರ (ತಿದ್ದುಪಡಿಯಂತೆ) ಪಾಲಿಸ್ಟರಿನ್ ಮತ್ತು ವಿಸ್ತರಿತ ಪಾಲಿಸ್ಟರಿನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ಜುಲೈ 2022 ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ, ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಈಗಾಗಲೇ ನಿಷೇದಿಸಲಾಗಿದೆ. ಈ ಪ್ರಕಾರ ಪ್ಲಾಸ್ಟಿಕ್ ಕ್ಯಾರಿಬಾಗ್, ಬ್ಯಾನರ್‌ಗಳು, ಬಂಟಿಗ್, ಪ್ಲೇಟ್, ಪ್ಲೆಕ್ಸ್, ಪ್ಲಾಸ್ಟಿಕ್ ಧ್ವಜಗಳು, ಕಪ್‌ಗಳು, ಸ್ಪೂನ್‌ಗಳು, ಆಂಟಿಕೊಳ್ಳುವ ಫಿಲಂಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾ, ಥರ್ಮಾಕೋಲ್ ಮತ್ತು ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳನ್ನು ನಿಷೇಧಿಸಲಾಗಿದೆ.

ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು 2021 ರಲ್ಲಿ ಮೇಲಿನ ನಿಷೇಧಿತ ಉತ್ಪನ್ನಗಳ ಜೊತೆಗೆ ಇನ್ನೂ ಹಲವು ಹೆಚ್ಚುವರಿ ಏಕೆ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 2022ರ ಜು.1ರಿಂದ ಜಾರಿಗೆ ಬರುವಂತೆ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್ಸ್, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಪಿಕರ್, ಪ್ಲಾಸ್ಟಿಕ್ ಧ್ವಜ, ಕ್ಯಾಂಡಿ ಸ್ಟಿಕ್, ಐಸ್‌ಕ್ರೀಂ ಸ್ಟಿಕ್, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟರಿನ್ (ಥರ್ಮಾಕೋಲ್), ಪ್ಲೇಟ್, ಕಪ್, ಲೋಟ, ಪೋರ್ಕ್, ಚಮಚೆ, ಕ್ಯಾರಿ ಬ್ಯಾಗ್, ಚಾಕು, ಟ್ರೇ, ಕಟ್ಲರಿಗಳು, ಸ್ವೀಟ್ ಬಾಕ್ಸ್‌ಗಳ ಸುತ್ತ-ಸುತ್ತುವ ಅಥವಾ ಪ್ಯಾಕಿಂಗ್ ಫಿಲಂಗಳು, ಆಮಂತ್ರಣ ಪತ್ರಗಳು, ಸಿಗರೇಟ್ ಪ್ಯಾಕೇಟ್, 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ ಪಿವಿಸಿ ಬ್ಯಾನರ್, ಸ್ಟಿಕರ್‌ಗಳನ್ನು ನಿಷೇಧಿಸಲಾಗಿದೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಧಿಸೂಚನೆಯಲ್ಲಿ ನಿರ್ಧಿಷ್ಟಪಡಿಸಿದ ಟೈಮ್ ಲೈನ್‌ಗಳ ಎಲ್ಲಾ ವಸ್ತುಗಳ ಉತ್ಪಾದಕರು ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳು, ಅಂಗಡಿ ಮಾಲೀಕರು, ಇ-ಕಾಮರ್ಸ್ ಕಂಪನಿಗಳು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು, ಮಾರುಕಟ್ಟೆ ಸ್ಥಳ, ಶಾಲೆ-ಕಾಲೇಜು, ಕಚೇರಿ ಸಂಕೀರ್ಣ, ಶಾಪಿಂಗ್ ಕೇಂದ್ರ, ಸಿನಿಮಾ ಹಾಲ್‌ಗಳು, ಪ್ರವಾಸೋದ್ಯಮ ಸ್ಥಳ, ಆಸ್ಪತ್ರೆ, ಇತರೆ ಸಂಸ್ಥೆಗಳು ಏಕ ಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಬಳಕೆಯನ್ನು ನಿಲ್ಲಿಸುವಂತೆ ತಿಳಿಸಲಾಗಿದೆ.

ಇದಲ್ಲದೆ 2022ರ ಜೂ.30ರೊಳಗೆ ತಿಳಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಎಲ್ಲಾ ಇ-ಕಾಮರ್ಸ್, ಕಂಪನಿಗಳ ವೆಬ್ ಸೈಟ್‌ನಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮತ್ತು ಪ್ರದರ್ಶನ, ಜಾಹಿರಾತುಗಳನ್ನೂ ಸಹ ನಿಷೇಧಿಸಲಾಗಿದೆ.
ಆದೇಶ ಉಲ್ಲಂಘಿಸಿದರೆ ಪರಿಸರ (ಸಂರಕ್ಷಣೆ) ಕಾಯ್ದೆ 1986 ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಳ್ಳುವ ಮತ್ತು ಅಂತಹ ಕೈಗಾರಿಕೆಗಳಿಗೆ ಮುಚ್ಚುವ ಆದೇಶವನ್ನು ನೀಡಲಾಗುವುದು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಹೊರಡಿಸಿದ ಮಾರ್ಗಸೂಚನೆಯ ಪ್ರಕಾರ ಪ್ರತಿ ಟನ್‌ಗೆ 5 ಸಾವಿರ ರೂ. ರಂತೆ ದಂಡ ವಿಧಿಸಲಾಗುವುದು. ಚಿಲ್ಲರೆ ವ್ಯಾಪಾರಿಗಳಿಗೆ ಅನುಸೂಚನೆಯ ಅನುಸಾರ ದಂಡ ವಿಧಿಸಲಾಗುವುದು ಎಂದು ಚಾಮರಾಜನಗರ ನಗರಸಭೆ ಆಡಳಿತಾಧಿಕಾರಿಗಳು ಹಾಗೂ ಪೌರಾಯುಕ್ತ ರಾಮದಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.