ಜಿಲ್ಲೆ

ವಿಜ್ಞಾನ-ತಂತ್ರಜ್ಞಾನ ಮಂಡಳಿಯೊಂದಿಗೆ ಒಡಂಬಡಿಕೆ

ಕಿರಣ್ ಮಾದರಹಳ್ಳಿ

ಚಾಮರಾಜನರ: ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ನಡುವೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪೂರಕವಾದ ಅನ್ವೇಷಣೆ, ಸಂಶೋಧನೆ ಹಾಗೂ ಅಧ್ಯಯನಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ನಗರದ ಹೊರವಲಯದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಡಂಬಡಿಕೆಗೆ ಸಹಿ ಹಾಕಿ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಮಾತನಾಡಿ, ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ಪ್ರತಿ ವಿಶ್ವವಿದ್ಯಾನಿಲಯದಲ್ಲೂ ಬೌದ್ಧಿಕ ಆಸ್ತಿ ಕೋಶದ ಘಟಕಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನಗಳಿಗೆ ಪೂರಕವಾದ ಸಂಶೋಧನೆ ಮತ್ತು ಅನ್ವೇಷಣೆಗಳಿಗೆ, ಭೌಗೋಳಿಕ ಉತ್ಪನ್ನಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ನಮ್ಮ ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ನಡುವೆ ಒಡಂಬಡಿಕೆ ಮಾಡಿಕೊಂಡಿದ್ದು, ನಮ್ಮ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಾಪಕರುಗಳಿಗೆ ನೆರವಾಗಲಿದೆ ಎಂದರು.

ಕೆಎಸ್‌ಸಿಎಸ್‌ಟಿ ಕಾರ್ಯನಿರ್ವಾಹಕ ಕಾರ್ಯದರ್ಶಿ ಯು.ಟಿ ವಿಜಯ್ ಮಾತನಾಡಿ, ಕೆಎಸ್ಸಿಎಸ್‌ಟಿ ವಿಜ್ಞಾನ, ತಂತ್ರಜ್ಞಾನಕ್ಕೆ ಪೂರಕವಾದ ಕಾರ್ಯಾಗಾರ, ವಿಶೇಷ ಉಪನ್ಯಾಸ ಮತ್ತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಸಂಶೋಧಕರಿಗೆ, ರೈತರಿಗೆ, ಉತ್ಪನ್ನಗಳನ್ನು ಸಿದ್ದಪಡಿಸುವ ಸಂಪನ್ಮೂಲ ವ್ಯಕ್ತಿಗಳಿಗೆ ಧನಸಹಾಯ ಹಾಗೂ ಕಾಪಿರೈಟ್ (ಹಕ್ಕನ್ನು) ನೀಡಲಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯದ ಕುಲಪತಿಗಳ ಸಹಮತ ಸೂಚಿಸಿ ಒಡಂಬಡಿಕೆಗೆ ಸಹಿ ಮಾಡಿದ್ದು ಸಂತಸವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿ ಡಾ. ಸರಸಿಜ ಪದ್ಮನಾಭನ್, ಡಾ.ನಂದಿನಿ, ಡಾ. ಪ್ರಜನ್ಯ, ವಿಶ್ವವಿದ್ಯಾನಿಲಯದ ಪಿ.ಎಂ.ಇ.ಬಿ ನಿರ್ದೇಶಕ ಡಾ. ಸಿದ್ದರಾಜು, ಬೌದ್ದಿಕ ಆಸ್ತಿ ಕೋಶದ ಸಂಯೋಜನಾಧಿಕಾರಿ ಹಾಜೀರಾ ನಸ್ರೀನ್, ಕಾರ್ತೀಕ್, ದಿವ್ಯ, ಕಾಮೀಲಾ ತಬ್ಸುಮ್ ಹಾಗೂ ಇತರರು ಹಾಜರಿದ್ದರು.