ಜಿಲ್ಲೆ

58 ವರ್ಷಗಳಲ್ಲಿ 61 ಜನ ಹುತಾತ್ಮರು

ಕಿರಣ್ ಮಾದರಹಳ್ಳಿ

ಚಾಮರಾಜನಗರ: ರಾಜ್ಯದ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಯ ಅಂತರಾಳದಲ್ಲಿ ಪ್ರಾಣತ್ಯಾಗದ ಬೇರು ಅಡಗಿದೆ.

ಸೆ.11ರ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನದಂದು ಅರಣ್ಯಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಲಾಗುತ್ತದೆ. ಇವರ ಅಪ್ರತಿಮ ತ್ಯಾಗದ ಮೇಲೆ ಕಾಡು ಬೆಳೆದು, ಪ್ರಾಣಿಗಳು ಸ್ವಚ್ಛಂದವಾಗಿ ಬದುಕುತ್ತಿವೆ. ರಾಜ್ಯದ ಕಾಡುಗಳ ರಕ್ಷಣೆಗಾಗಿ ಕಳೆದ 58 ವರ್ಷಗಳಲ್ಲಿ 61 ಜನರು ಪ್ರಾಣತ್ಯಾಗ ಮಾಡಿದ್ದಾರೆ.

1966ರಿಂದ 2024ರವರೆಗೆ ಅರಣ್ಯ ರಕ್ಷಕರು, ವನಪಾಲಕರು, ಅರಣ್ಯಾಧಿಕಾರಿಗಳು, ದಿನಗೂಲಿ ನೌಕರರು, ಅರಣ್ಯ ವೀಕ್ಷಕರು, ಪಶು ವೈದ್ಯ, ಕೇರ್‌ಟೇಕರ್, ಗಸ್ತು ಅರಣ್ಯ ಪಾಲಕರು, ಹೊರಗುತ್ತಿಗೆ ನೌಕರರು ಮತ್ತು ಇತರರು ಅರಣ್ಯ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಳಗಾವಿ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಮಡಿಕೇರಿ, ಚಿಕ್ಕಮಗಳೂರು, ಸಿರಸಿ, ಸಾಗರ, ಭದ್ರ, ಧಾರವಾಡ, ವಿರಾಜಪೇಟೆ, ಹುಣಸೂರು, ತುಮಕೂರು, ಶಿವಮೊಗ್ಗ, ಹಳಿಯಾಳ, ಗದಗ, ಬನ್ನೇರುಘಟ್ಟ, ಭದ್ರಾವತಿ, ಮಂಗಳೂರು, ದಾಂಡೇಲಿ, ನಾಗರಹೊಳೆ, ರಾಮನಗರ, ಸಂಗಮ, ಕಲ್ಕೆರೆ, ಹಾಸನ, ಕಾವೇರಿ ವನ್ಯಜೀವಿಧಾಮ, ಸಾಗರ, ಪುಣಜನೂರು, ಮೊಳಕಾಲ್ಮೂರು, ಆಲೂರು ಅರಣ್ಯಗಳಲ್ಲಿ ಕರ್ತವ್ಯ ನಿರತರಾಗಿದ್ದಾಗ ಅವಘಡಗಳು ಸಂಭವಿಸಿವೆ. ಕಾಡುಗಳ್ಳರು, ವನ್ಯಜೀವಿಗಳ ದಾಳಿ, ಅವಘಡಗಳು ಸಂಭವಿಸಿದ ವೇಳೆ ಪ್ರಾಣದ ಹಂಗು ತೊರೆದು ಹೋರಾಟ ನಡೆಸಿ ಮರಣ ಹೊಂದಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರಾಣತ್ಯಾಗ ಮಾಡಿದ್ದಾರೆ.
58 ವರ್ಷ 61 ಹುತಾತ್ಮರು: 1966ರಿಂದ 2024ರವರೆಗೆ ರಾಜ್ಯದಲ್ಲಿ 61 ಜನರು ಹುತಾತ್ಮರಾಗಿದ್ದಾರೆ. 1966ರ ಆ.13ರಲ್ಲಿ ಬೆಳಗಾವಿ ವಿಭಾಗದಲ್ಲಿ ಅರಣ್ಯ ರಕ್ಷಕ ಶಂಕರ್ ಮೂಡಲಗಿಯಿಂದ ಶುರುವಾದ ಬಲಿದಾನ 2024ರ ಜು.11ರಂದು ಪ್ರಾಣತ್ಯಾಗ ಮಾಡಿದ ಬನ್ನೇರುಘಟ್ಟ ವನ್ಯಜೀವಿ ವಲಯದ ಕಲ್ಕೆರೆ ಗಸ್ತಿನ ದಿನಗೂಲಿ ನೌಕರ ಚಿಕ್ಕಮಾದಯ್ಯ ಅವರೆಗೂ ಮುಂದುವರೆದಿದೆ.

1966ರಿಂದ ಮುಂದುವರೆದು ಜೋಗೇಗೌಡ, ಅಬ್ದುಲ್ ಅಹಮದ್, ಅಹಮದ್ ಖಾನ್, ಹುಚ್ಚಶೆಟ್ಟಿ, ಕೆ.ಎನ್.ರಂಗರಾಜಅರಸ್, ಜಿ.ಐ.ಹಂಪಯ್ಯ, ಎನ್.ಎ.ಬಸರಿಕಟ್ಟಿ, ಕೆ.ಎಂ.ಪೃತುಕುಮಾರ್, ಎಚ್.ಎ.ಹನುಮಂತಪ್ಪ, ಪಿ.ಡಿ.ಖಾನಾಪುರಿ, ಅರವಿಂದ್ ಡಿ ಹೆಗ್ಡೆ, ಬಿ.ಸಿ.ಮೋಹನಯ್ಯ, ಎಚ್.ಬಸವಣ್ಣೆ, ಪಿ.ಶ್ರೀನಿವಾಸ್ ಪ್ರಾಣತ್ಯಾಗ ಮಾಡಿದ್ದಾರೆ. ಬಿ.ನಾಗರಾಜು, ಎಂ.ಆರ್.ಪೂಜಾರಿ, ಜಿ.ಕೆ.ಅಣ್ಣಯ್ಯ, ಕೆ.ಎಸ್.ವಿಠಲ್, ಎಲ್.ಲೋಕೇಶ್, ಎಸ್‌ಟಿ.ಗಣೇಶ್, ವೈ.ಹನುಂತಪ್ಪ, ಪಿ.ಎ.ಪೊನ್ನಪ್ಪ, ಜಿ.ಕೆ.ರಾಮ, ಎಂ.ವಿ.ರಂಗಗೌಡ, ಶ್ರೀನಿವಾಸಯ್ಯ, ವೀರಭದ್ರಪ್ಪ, ಅಣ್ಣಪ್ಪ ಮಲ್ಲಪ್ಪ ಮುಗುಳಖೋಡ, ಕಾಳೇಗೌಡ, ಎಂ.ಡಿ.ಶಿರಹಟ್ಟಿ, ರಾಜಶೇಖರಪ್ಪ, ಎಚ್.ಸಿ.ನಾರಾಯಣ್, ಡಾ.ಜಿ.ಕೆ.ವಿಶ್ವನಾಥ್, ಮಂಜುನಾಥಪ್ಪ, ಬಿ.ಪ್ರಭಾಕರ್, ಎಂ.ಎಚ್.ನಾಯಕ, ದಬ್ಬಣ್ಣ, ಟಿ.ಸುರೇಶ್, ರಾಮಯ್ಯ, ಪಂಚಲಿಂಗಯ್ಯ ಬಲಿದಾನ ಮಾಡಿದ್ದಾರೆ. ದೊಡ್ಡಶೆಟ್ಟಿ, ಮುರುಗೆಪ್ಪ ತಮ್ಮನಗೊಳ್, ಎಸ್.ಮಣಿಕಂದನ್, ಮಹದೇವ, ಚಿಕ್ಕಿರಯ್ಯ, ಹಲಗ, ಎನ್.ಎಲ್.ಅಣ್ಣೇಗೌಡ, ಎಂ.ಎಚ್.ನಾಗರಾಜು, ಎಂ.ಮಹೇಶ್, ಶಿವಕುಮಾರ್, ಶಿವನಂಜಯ್ಯ, ಜಿ.ಗುರುರಾಜ್, ವಿ.ಪುಟ್ಟರಾಜು, ಸಿ. ಕಿಶೋರ್ ಕುಮಾರ್, ಎಸ್.ಜೆ.ಸುಂದರೇಶನ್, ಟಿ.ಆರ್.ಪ್ರಕಾಶ್, ಎಚ್.ಎಚ್.ವೆಂಕಟೇಶ್, ವೈ.ಎಂ.ಗಿರೀಶ್, ಕೆ.ಕಾರ್ತಿಕ್, ಚಿಕ್ಕಮಾದಯ್ಯ ಪ್ರಾಣತ್ಯಾಗ ಮಾಡಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ಹುತಾತ್ಮರ ದಿನಾಚರಣೆ:
‘ಅರಣ್ಯಕ್ಕಾಗಿ ಹುಟ್ಟು, ಬದುಕು, ಸಾವು’ ಎನ್ನುವ ಆದರ್ಶವನ್ನು ಅನುಸರಿಸಿ ನರಹಂತಕ ವೀರಪ್ಪನ್‌ನಿಂದ 1991ರ ನ.10ರಂದು ಹತ್ಯೆಯಾದ ‘ಕರ್ನಾಟಕ ಅರಣ್ಯ ಇಲಾಖೆಯ ಅಭಿಮಯ್ಯ’ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶ್ರೀನಿವಾಸ್ ಅವರು ಚಾಮರಾಜನಗರದ ಅರಣ್ಯ ಮತ್ತು ವನ್ಯಜೀವಿಗಳ ರಕ್ಷಣೆಗಾಗಿಯೇ ಪ್ರಾಣಬಿಟ್ಟರು. ಇವರ ವೀರಮರಣದ ಸ್ಮರಣಾರ್ಥ ನ.10ರಂದು ರಾಜ್ಯ ಅರಣ್ಯ ಇಲಾಖೆ ಹುತಾತ್ಮರ ದಿನವೆಂದು ಆಚರಿಸುತ್ತದೆ.
ಬಿಷ್ಣೋಯಿಗಳ ತ್ಯಾಗದ ಸಂಕೇತ: ಮರಗಳ ಸಂರಕ್ಷಣೆಗಾಗಿ ಪ್ರಾಣತ್ಯಾದ ಮಾಡಿದ ಬಿಷ್ಣೋಯಿ ಸಮುದಾಯದ ಬಲಿದಾನದ ಸ್ಮರಣಾರ್ಥ ಸೆ.11ರಂದು ದೇಶದೆಲ್ಲೆಡೆ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನವನ್ನು ಆಚರಿಸಲಾಗುತ್ತದೆ. 1730ರ ಸೆ.11ರಂದು ಜೋಧಪುರ್ ಮಹಾರಾಜ ಅಭಯ್‌ಸಿಂಗ್ ಹೊಸ ಅರಮನೆ ಕಟ್ಟಲು ತನ್ನ ಸೈನಿಕರನ್ನು ಕೇಜರ್ಲಿ ಪ್ರಾಂತ್ಯದಲ್ಲಿ ಬೆಳೆದಿದ ಮರಗಳನ್ನು ತರಲು ಕಳುಹಿಸಿದ್ದನು.ಇದನ್ನು ವಿರೋಧಿಸಿದ ಮರಗಳ ಸಂರಕ್ಷಣೆಗೆ ನಿಂತ ಬಿಷ್ಣೋಯಿ ಸಮುದಾಯದ 363 ಮಹಿಳೆಯರು, ಪುರುಷರ, ಮಕ್ಕಳನ್ನು ಸೈನಿಕರು ಕೊಲ್ಲುತ್ತಾರೆ.

ಸೆ.11ರಂದು ದಿನಾಚರಣೆ
ಅರಣ್ಯ ಇಲಾಖೆಯ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ಸ್ಮರಣ ದಿನ ಕಾರ್ಯಕ್ರಮವನ್ನು ಸೆ.11 ರಂದು ಬೆಳಗ್ಗೆ 9 ಗಂಟೆಗೆ ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಎಸ್. ಭಾರತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಚಾಮರಾಜನಗರ (ಪ್ರಾದೇಶಿಕ) ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ. ಹೀರಾಲಾಲ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶ್ರೀಪತಿ ಹುತಾತ್ಮರ ನಾಮ ವಾಚನ ಮಾಡುವರು.
ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಸಭ್ಯಶ್ರೀ ಉಪಸ್ಥಿತರಿರುವರು.

ಪ್ರಾಣತ್ಯಾಗ ಮಾಡಿರುವ 61 ಜನರಲ್ಲಿ 16 ಜನರು ಚಾಮರಾಜನಗರ ಜಿಲ್ಲೆಯವರು ಇದ್ದಾರೆ. 1966ರಲ್ಲಿ ಅರಣ್ಯ ರಕ್ಷಕ ಮಾದಾಯ್ಕನಿಂದ ಹಿಡಿದು ಪುಣಜನೂರು ವನ್ಯಜೀವಿ ವಲಯದ ಅರಣ್ಯ ವೀಕ್ಷಕ ಸಿ.ಕಿಶೋರ್‌ಕುಮಾರ್ ಅವರೆಗೆ ಅರಣ್ಯ ಮತ್ತು ವನ್ಯಜೀವಿಗಳಿಗಾಗಿ ಪ್ರಾಣ ಬಿಟ್ಟಿರುವುದನ್ನು ನಾವು ಸ್ಮರಿಸಬಹುದು.ಹೀರಾಲಾಲ್, ಸಿಸಿಎ್, ಚಾಮರಾಜನಗ ವೃತ್ತ, ಅರಣ್ಯ ಇಲಾಖೆ