ಯಳಂದೂರು: ಗ್ರಾಮೀಣಾಭಿವೃದ್ಧಿಗೆ ಗ್ರಾಮಸ್ಥರ ಸಹಯೋಗ ಮುಖ್ಯ. ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮ ಪಂಚಾಯಿತಿಗೆ ವರದಾನವಾಗಿದ್ದು, ಎಲ್ಲರೂ ಇದರ ಲಾಭ ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಮದ್ದೂರು ಗ್ರಾಪಂನ ನೋಡಲ್ ಅಧಿಕಾರಿ ಕೆ.ಕಾಂತರಾಜು ತಿಳಿಸಿದರು.
ಮದ್ದೂರು ಗ್ರಾಮ ಪಂಚಾಯಿತಿಯ ಮಾದರಿ ಮನೆಯಲ್ಲಿ ಶುಕ್ರವಾರ ನಡೆದ ನರೇಗಾ ಹಾಗೂ 15ನೇ ಹಣಕಾಸು ಯೋಜನೆಗಳ ಸಾಮಾಜಿಕ ಲೆಕ್ಕ ಪರಿಶೋಧನೆಯ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮದ್ದೂರು ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲೂ ಉದ್ಯೋಗ ಖಾತ್ರಿ ಯೋಜನೆಯಡಿ ಅನೇಕ ಕೆಲಸಗಳು ನಡೆದಿವೆ. ಗ್ರಾಮದ ಕೆರೆ ಕಟ್ಟೆ, ಕಾಲುವೆ ಅಭಿವೃದ್ಧಿ ಸೇರಿದಂತೆ ಇತರ ಸಮೂಹ ಕೆಲಸಗಳು ಹಾಗೂ ವೈಯಕ್ತಿಕ ಕಾಮಗಾರಿಗಳು ನಡೆದಿವೆ. ಗ್ರಾಮೀಣ ಭಾಗದಲ್ಲಿ ಈ ಯೋಜನೆಯಿಂದ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರು.
ನರೇಗಾ ಲೆಕ್ಕ ತಪಾಸಣೆಯ ತಾಲೂಕು ಸಂಯೋಜಕ ಪ್ರಸನ್ನ ಮಾತನಾಡಿ, 2023 ರ ಏಪ್ರಿಲ್‌ನಿಂದ 2024 ರ ಮಾರ್ಚ್ ವರೆಗೆ ಪಂಚಾಯಿತಿ ವ್ಯಾಪ್ತಿಯಲ್ಲಿ 189 ತೋಟಗಾರಿಕೆ ಇಲಾಖೆ 8, ಅರಣ್ಯ ಇಲಾಖೆಯ 3 ಕಾಮಗಾರಿಗಳು ಸೇರಿದಂತೆ ಒಟ್ಟು 200 ಕಾಮಗಾರಿಗಳು ನಡೆದಿವೆ. ಇದರಲ್ಲಿ 59.34 ಲಕ್ಷ ರೂ. ಕೂಲಿ ಮೊತ್ತ ಹಾಗೂ 10 ಲಕ್ಷ ರೂ. ಸಾಮಾಗ್ರಿ ಮೊತ್ತ ಸೇರಿದಂತೆ ಒಟ್ಟು 69.35 ಲಕ್ಷ ರೂ. ಕಾಮಗಾರಿಗಳು ನಡೆದಿವೆ ಎಂದು ಮಾಹಿತಿ ನೀಡಿದರು.
15 ನೇ ಹಣಕಾಸು ಯೋಜನೆಯಡಿ ವಿದ್ಯುತ್ ದೀಪ, ಸೋಲಾರ್ ದೀಪ, ಗ್ರಾಪಂ ಪರಿಕರಗಳ ಖರೀದಿ, ಸ್ವಚ್ಛತೆ ಸಾಮಗ್ರಿಗಳ ಖರೀದಿ ಹಾಗೂ ವೇತನಕ್ಕೆ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಸುಶೀಲಮ್ಮ, ಉಪಾಧ್ಯಕ್ಷ ವೆಂಕಟರಮಣ ಸ್ವಾಮಿ, ಸದಸ್ಯ ಮಹಾದೇವ, ಪಿಡಿಒ ನಟರಾಜು, ಕಾರ್ಯದರ್ಶಿ ನಂಜಪ್ಪ, ಪ್ರಸನ್ನ, ಲಿಂಗರಾಜು, ಪ್ರವೀಣ, ಸತ್ಯರಾಜ್ ಸೇರಿದಂತೆ ಅನೇಕರು ಇದ್ದರು.