ಗುಂಡ್ಲುಪೇಟೆ: ತಾಲೂಕಿನ ಮಂಚಹಳ್ಳಿ ಗ್ರಾಮಕ್ಕೆ ಸಕಾಲಕ್ಕೆ ಬಸ್ಸುಗಳು ಬಾರದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿಗಳು ಮಂಗಳವಾರ ಸಾರಿಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಸಾರಿಗೆ ಬಸ್ಸನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿ ದಿನವೂ ಗ್ರಾಮಕ್ಕೆ ಸಕಾಲಕ್ಕೆ ಬಸ್ಸುಗಳು ಆಗಮಿಸದೆ ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಉಪಯೋಗವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಸ್ಥಳಕ್ಕೆ ಸಾರಿಗೆ ಅಧಿಕಾರಿಗಳು ಬರುವಂತೆ ಪಟ್ಟುಹಿಡಿದರು. ಈ ವೇಳೆ ಚಾಲಕರ ಮೊಬೈಲ್‌ನಲ್ಲಿ ಅಧಿಕಾರಿಗಳ ಜತೆ ಮಾತನಾಡಿದ ಗ್ರಾಮಸ್ಥರು ಮುಂದಿನ ದಿನಗಳಲ್ಲಿ ಇದೇ ಪರಿಪಾಠ ಮುಂದುವರೆಸಿದರೆ ಎಲ್ಲ ಬಸ್ಸುಗಳನ್ನು ತಡೆಯಲಾಗುವುದು ಎಂದು ಎಚ್ಚರಿಕೆ ನೀಡಿ ಬಸ್ ಸಂಚಾರಕ್ಕೆ ಅವಕಾಶ ನೀಡಿದರು.