ಚಾಮರಾಜನಗರ : ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಲಹೆ ನೀಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಶಾಲಾ ಶಿಕ್ಷಣ ಇಲಾಖೆಯ ಸಭಾಂಗಣದಲ್ಲಿ ರಾಜ್ಯ ಪರಿಸರ ಮಾಲಿನ್ಯ ಮಂಡಳಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ ಆಚರಣೆ ಪ್ರಯುಕ್ತ ಮಣ್ಣಿನ ಕಲಾಕೃತಿ ತಯಾರಿಕೆ ಕುರಿತು ವಿವಿಧ ಶಾಲಾ ಮಕ್ಕಳಿಗೆ ಸೋಮವಾರ ಆಯೋಜಿಸಿದ್ದ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗಣೇಶ ಹಬ್ಬ ಎಂದರೆ ಎಲ್ಲರೂ ಭಕ್ತಿ-ಭಾವ, ಸಂಭ್ರಮ, ಸಡಗರದಿಂದ ಆಚರಿಸುವ ಹಬ್ಬ. ಹಾಗೆಯೇ ಪರಿಸರ ಸಮತೋಲನವನ್ನು ನಾವೆಲ್ಲರೂ ಕಾಪಾಡಿಕೊಳ್ಳಬೇಕಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಬಣ್ಣ ಬಣ್ಣದ ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ನಮ್ಮ ಸುತ್ತಲಿನ ನಿರ್ಮಲ ಪರಿಸರ ಹಾನಿಯಾಲಿದೆ. ಬಣ್ಣಕ್ಕಿಂತ ಪರಿಸರ ಮುಖ್ಯ. ಹಾಗಾಗಿ ಪ್ರತಿಯೊಬ್ಬರೂ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಬದಲಾವಣೆ ಎನ್ನುವುದು ಮೊದಲು ಮಕ್ಕಳಿಂದಲೇ ಆರಂಭವಾಗಬೇಕು. ಮಕ್ಕಳು ತಮ್ಮ ಪಾಲಕರು, ನೆರೆಹೊರೆಯವರಿಗೂ ಮಣ್ಣಿನಿಂದಲೇ ತಯಾರಿಸಿದ ಮೂರ್ತಿಗಳನ್ನು ಬಳಸುವಂತೆ ತಿಳಿಹೇಳಬೇಕು ಹಾಗೂ ಮನವೊಲಿಸಬೇಕು ಎಂದರು.
ಈ ಸಂದರ್ಭದಲ್ಲಿ ಗುಂಡ್ಲುಪೇಟೆ ತಾಲೂಕು ದೊಡ್ಡತುಪ್ಪೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಗಣೇಶ್ ಅವರು ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸುವ ಕಲೆಗಾರಿಕೆಯನ್ನು ಪ್ರಾತ್ಯೇಕ್ಷಿಕೆ ಮೂಲಕ ಶಾಲಾ ಮಕ್ಕಳಿಗೆ ಪ್ರಸ್ತುತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಪ್ರಸನ್ನ, ಪ್ರಾದೇಶಿಕ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಉಮಾಶಂಕರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್.ಶಂಕರ್, ಲಕ್ಷ್ಮೀಪತಿ ಇತತರು ಇದ್ದರು.