ಜಿಲ್ಲೆ

ಬೆಳೆಹಾನಿ ವಿವರ ಪ್ರಕಟ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಕಿರಣ್ ಮಾದರಹಳ್ಳಿ

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ 2024-252ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಹಾನಿಯಾಗಿರುವ ಬೆಳೆಹಾನಿಗೆ ಪರಿಹಾರ ಪಾವತಿಸುವ ಸಂಬಂಧ ಬೆಳೆಹಾನಿ ವಿವರವನ್ನು ಪ್ರಕಟಿಸಲಾಗಿದ್ದು ಆಕ್ಷೇಪಣೆಗಳಿದ್ದಲ್ಲಿ ಸೆ.12ರೊಳಗೆ ಸಲ್ಲಿಸಬಹುದಾಗಿದೆ.

ಬೆಳೆಹಾನಿಗೆ ಸಂಬಂಧಿಸಿದಂತೆ ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್ ಮಾರ್ಗಸೂಚಿಗಳನ್ವಯ ಬೆಳೆಹಾನಿಗೆ ಪರಿಹಾರ ಪಾವತಿಸುವ ಕುರಿತು ಬೆಳೆಹಾನಿ ವಿವರ ನಮೂನೆಯಲ್ಲಿ ಸೆಪ್ಟೆಂಬರ್ 4ರಂದೇ ಕರಡು ಮೆಮೊರಾಂಡಾಂ ಅನ್ನು ತಯಾರಿಸಿ ತಾಲೂಕಿನ ನಾಡಕಚೇರಿ, ಗ್ರಾಮ ಪಂಚಾಯಿತಿ, ತಹಶೀಲ್ದಾರ್, ತೋಟಗಾರಿಕೆ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ.

ಕರಡು ಮೆಮರಾಂಡಾಂನಲ್ಲಿ ಇರುವ ಬೆಳೆಹಾನಿ ವಿವರದ ಬಗ್ಗೆ ರೈತರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸೆಪ್ಟೆಂಬರ್ 12ರೊಳಗೆ ತಹಶೀಲ್ದಾರ್, ತೋಟಗಾರಿಕೆ ಇಲಾಖೆಗೆ ಸಲ್ಲಿಸಬಹುದಾಗಿದೆ. ಸೆಪ್ಟೆಂಬರ್ 12ರ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಗುಂಡ್ಲುಪೇಟೆ ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.