ಚಾಮರಾಜನಗರ : ಜಿಲ್ಲಾಡಳಿತ, ಜಿಲ್ಲಾ ನಗರಭಿವೃದ್ಧಿ ಕೋಶ ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪೌರಕಾರ್ಮಿಕರ ಕುಂದು ಕೊರತೆ, ಸಂವಾದ ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್ ಪೌರಕಾರ್ಮಿಕರ ಸಮಸ್ಯೆ ಆಲಿಸಿದರು.
ಇದಕ್ಕೂ ಮೊದಲು ಮಾತನಾಡಿದ ಅವರು, ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ನಿರ್ದೇಶನದ ಮೇರೆಗೆ ನಗರಸಭೆ ವ್ಯಾಪ್ತಿಯ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಿ ಮರುವಸತಿ ಕಲ್ಪಿಸುವ ನಿಟ್ಟಿನಲ್ಲಿ ಕುಂದು ಕೊರತೆ ಹಾಗೂ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪೌರಕಾರ್ಮಿಕರು ತಮ್ಮ ಕುಂದುಕೊರತೆ ಪರಿಹರಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.
ನಗರ ಸ್ವಚ್ಛತಾ ಕಾರ್ಯದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೂ ತೊಡಗಿಸಿಕೊಳ್ಳುವ ಪೌರಕಾರ್ಮಿಕರು ಶ್ರಮಜೀವಿಗಳಾಗಿದ್ದಾರೆ. ನಗರದ ಸ್ವಚ್ಛತೆಗಾಗಿ ಪೌರಕಾರ್ಮಿಕರಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ. ಪೌರಕಾರ್ಮಿಕರು ದಿನನಿತ್ಯದ ಕಾಯಕದ ಜೊತೆಗೆ ತಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಸಂವಾದ ಕಾರ್ಯಕ್ರಮದ ಭಾಗವಾಗಿ ಆರೋಗ್ಯ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ. ಪೌರಕಾರ್ಮಿಕರು ಶಿಬಿರದ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಪೌರಕಾರ್ಮಿಕ ನಾಗರಾಜು ಮಾತನಾಡಿ, ನಗರಸಭೆ ವತಿಯಿಂದ ಕಾಯಂ, ನೇರವೇತನ, ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ವೇತನ ನೀಡಬೇಕು. ಸಂಕಷ್ಟ ಭತ್ಯೆಯನ್ನು ವೇತನದ ಜತೆಗೆ ಪ್ರತಿ ತಿಂಗಳು ಪಾವತಿಸಬೇಕು. ನಗರಸಭೆಯಲ್ಲಿ 120 ಪೌರಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು, ಸಮಾನ ಕೆಲಸಕ್ಕೆ ಸಮಾನ ವೇತನದಡಿ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಕ್ರಮ ವಹಿಸಬೇಕು. 29ನೇ ವಾರ್ಡ್ ಪೌರಕಾರ್ಮಿಕರ ಕಾಲನಿಗೆ ರಸ್ತೆ, ಕುಡಿಯುವ ನೀರು, ಒಳಚರಂಡಿ ಸೌಲಭ್ಯವನ್ನು ಒದಗಿಸಬೇಕು. ಗೃಹಭಾಗ್ಯ ಯೋಜನೆಯಡಿ 24 ಕಾಯಂ ಪೌರಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಗುತ್ತಿಗೆ ಕಾರ್ಮಿಕರ ಕೆಲಸ ನಿರ್ವಹಿಸುತ್ತಿರುವ ಜೆಸಿಬಿ ವಾಹನ ಚಾಲಕ, ಕ್ಲೀನರ್‌ಗಳನ್ನು ಕಾಯಂಗೊಳಿಸಬೇಕು. ಹೊಸದಾಗಿ ನೇಮಕವಾಗಿರುವ 24 ಜನ ಕಾಯಂ ಪೌರಕಾರ್ಮಿಕರಿಗೆ ಎನ್.ಪಿ.ಎಸ್ ಪ್ರಾನ್ ಸಂಖ್ಯೆ ನೀಡಬೇಕು. ನಗರದ ಹೊರವಲಯದಲ್ಲಿರುವ ಆರ್‌ಟಿಒ ಕಚೇರಿ ಬಳಿ ಸರ್ವೆ ನಂ.65ರಲ್ಲಿ ಪೌರಕಾರ್ಮಿಕರ ಬಡಾವಣೆ ನಿರ್ಮಾಣಕ್ಕಾಗಿ 2 ಎಕರೆ ಭೂಮಿ ಮಂಜೂರಾಗಿದ್ದು, ಅಲ್ಲಿಯೇ ಬಡಾವಣೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಪೌರಕಾರ್ಮಿಕರ ಕುಂದು ಕೊರತೆ ಆಲಿಸಿ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ಮಾತನಾಡಿ, ತಾಂತ್ರಿಕ ಕಾರಣಗಳನ್ನು ಸರಿಪಡಿಸಿ ಸಕಾಲದಲ್ಲಿ ವೇತನ ಪಾವತಿಸಲಾಗುವುದು. ಮುಂದಿನ ದಿನಗಳಲ್ಲಿ ಇದು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಸಮಾನ ಕೆಲಸಕ್ಕೆ ಸಮಾನ ವೇತನ ಬೇಡಿಕೆ ಸರ್ಕಾರದ ಬಳಿಯಿದೆ. 2024ರ ಮೇ ಮಾಹೆವರೆಗೆ ಸಂಕಷ್ಟ ಭತ್ಯೆಯನ್ನು ನೀಡಲಾಗಿದ್ದು, ಸರ್ಕಾರದಿಂದ ಹಣ ಬಿಡುಗಡೆ ಆಗಬೇಕು. ಎಸ್‌ಎಫ್‌ಸಿ ಅನುದಾನ ಬಿಡುಗಡೆ ಬಳಿಕ ವೇತನದ ಜತೆಯೇ ನೀಡಲಾಗುವುದು. 35 ಪೌರಕಾರ್ಮಿಕರಿಗೆ ಮನೆ ನಿರ್ಮಿಸಲಾಗಿದೆ. ಇನ್ನು 24 ಮಂದಿಗೆ ಮನೆ ನಿರ್ಮಾಣಕ್ಕೆ 24 ಗುಂಟೆ ಭೂಮಿ ಮಂಜೂರಾಗಿದೆ. ನಗರಸಭಾ ವ್ಯಾಪ್ತಿಯ 9ನೇ ವಾರ್ಡ್‌ನಲ್ಲಿರುವ ಮನೆಗಳನ್ನು ಖುದ್ದಾಗಿ ಪರಿಶೀಲಿಸಿ ದುರಸ್ತಿಗೆ ಕ್ರಮ ವಹಿಸಲಾಗುವುದು. ಅಲ್ಲದೆ ಪೌರಕಾರ್ಮಿಕರ ಇತರೆ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು. ಸಂವಾದ ಕಾರ್ಯಕ್ರಮದ ಅಂಗವಾಗಿ ಪೌರಕಾರ್ಮಿಕರಿಗೆ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಔಷಧಗಳನ್ನು ವಿತರಿಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಾಜು, ಹಿರಿಯ ವೈದ್ಯಾಧಿಕಾರಿ ಡಾ.ಮಹದೇವ್, ಆರೋಗ್ಯ ಇಲಾಖೆಯ ವೈದ್ಯೆ ಡಾ.ರಂಜಿತಾ, ನಗರ ಆರೋಗ್ಯ ಕೇಂದ್ರದ ವೈದ್ಯೆ ಡಾ.ರಿಯಾ ದಿಶಾನಿ ರೇ, ಶೇಖರ್, ನಗರಸಭೆ ಲೆಕ್ಕ ಅಧೀಕ್ಷಕ ರುದ್ರಮುನಿಸ್ವಾಮಿ, ಯೋಜನಾಧಿಕಾರಿ ವೆಂಕಟನಾಯಕ್ ಹಾಜರಿದ್ದರು.