ಜಿಲ್ಲೆ

ಭರವಸೆಯಲ್ಲೇ ಸವೆಯುತ್ತಿದೆ ಬದುಕು

ಚಾಮರಾಜನಗರ: ಇಡಿ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇಗುಲದ ವಿಷ ಪ್ರಸಾದ ಸೇವನೆ ಪ್ರಕರಣ ನಡೆದು 6 ವರ್ಷ ಸಮೀಪಿಸುತ್ತಿದೆ. ಆದರೆ ಸಂತ್ರಸ್ತರಿಗೆ ಜಮೀನು ಹಾಗೂ ನಿವೇಶನ ನೀಡುವ ಭರವಸೆ ಇನ್ನೂ ಈಡೇರಿಲ್ಲ.

2018, ಡಿ.14 ರಲ್ಲಿ ದೇಗುಲದ ಗೋಪುರ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿತ್ತು. ದೇಗುಲಕ್ಕೆ ಬರುವ ಭಕ್ತರಿಗೆ ಪ್ರಸಾದ(ಬಾತ್) ತಯಾರಿಸಲಾಗಿತ್ತು. ಇದನ್ನು ಸೇವಿಸಿದ ಭಕ್ತರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರು. ಪ್ರಸಾದದಲ್ಲಿ ವಿಷ ಮಿಶ್ರಣವಾಗಿರುವುದು ತಿಳಿಯಿತು. ಇದನ್ನು ಸೇವಿಸಿದ್ದ ತಾಲೂಕಿನ ಬಿದರಹಳ್ಳಿ, ದೊರೆಸ್ವಾಮಿದೊಡ್ಡಿ, ವಡ್ಡರದೊಡ್ಡಿ, ಗೋಡೇಸ್ಟ್‌ನಗರ, ಸುಳವಾಡಿ, ಮ.ಬೆಟ್ಟ, ಹಳೆಯೂರು, ಕೊಂಬುಡಿಕ್ಕಿ, ತುಳಸಿಕೆರೆ, ಎಂ.ಜಿದೊಡ್ಡಿ ಹಾಗೂ ತೊಮಿಯಾರ್‌ಪಾಳ್ಯ ಗ್ರಾಮದ 17 ಜನರು ಮೃತಪಟ್ಟಿದ್ದರು. 125ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು.

ತನಿಖೆ ನಡೆಸಿದ ಪೊಲೀಸರು ಸಾಲೂರು ಮಠದ ಅಂದಿನ ಕಿರಿಯ ಶ್ರೀಗಳಾಗಿದ್ದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ಅವರನ್ನು ಬಂಧಿಸಿದ್ದರು. ವಿಷ ಪ್ರಸಾದ ಸೇವಿಸಿದ್ದ ಸಂತ್ರಸ್ತರ ಕುಟುಂಬಗಳಿಗೆ ಸರ್ಕಾರ ನೀಡಿದ್ದ ಭರವಸೆಯಲ್ಲಿ ಪರಿಹಾರದ ಹಣ ಹಾಗೂ ಪ.ಜಾತಿ. ಪಂಗಡದ ನಿಗಮದ ವತಿಯಿಂದ ಕೆಲವು ಸವಲತ್ತುಗಳು ಹೊರತುಪಡಿಸಿದರೆ ಕೆಲವು ಭರವಸೆಗಳು ಹಾಗೆಯೇ ಉಳಿದಿವೆ. 2018, ಡಿ.25ರಂದು ಬಿದರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಂತ್ರಸ್ತರ ಸಾಂತ್ವನಾ ಸಭೆಗೆ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ದರು. ಈ ವೇಳೆ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಧೃತಿಗೇಡಬೇಡಿ. ಸರ್ಕಾರ ಸದಾ ನಿಮ್ಮೊಂದಿಗೆ ಇರುತ್ತದೆ ಎಂದು ಭರವಸೆ ನೀಡಿದ್ದರಲ್ಲದೇ ಮೃತ ಕುಟುಂಬಗಳಿಗೆ 2 ಎಕರೆ ಜಮೀನು, ವಾಸಕ್ಕೆ ಮನೆ ಕಲ್ಪಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ನಿವೇಶನ ನೀಡುವ ಸಂಬಂಧ ಬಿದರಹಳ್ಳಿ ಗ್ರಾಮದ ಸರ್ವೇ ನಂಬರ್ 42ರಲ್ಲಿ 2 ಎಕರೆ ಜಮೀನನ್ನು ಗುರ್ತಿಸಲಾಗಿದ್ದು, ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಹಂಚಿಕೆ ಕಾರ್ಯವಾಗಿಲ್ಲ. ಇತ್ತ ಜಮೀನು ನೀಡುವ ಸಂಬಂಧ ಸರ್ಕಾರದಿಂದ ಯಾವುದೇ ಕ್ರಮವಾಗಿಲ್ಲ.