ಜಿಲ್ಲೆ

ಚಿನ್ನದಸರ ಅಪಹರಿಸಿದ್ದ ಆರೋಪಿಗೆ 7 ವರ್ಷ ಜೈಲು

ಎ.ಎಸ್.ಮಣಿಕಂಠ

ಚಾಮರಾಜನಗರ: ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಿದ್ದ ಆರೋಪಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 7 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.

ನಗರದ ಕೋರ್ಟ್ ರಸ್ತೆಯಲ್ಲಿ ನಿವಾಸಿ ಜಯಮ್ಮ ಎಂಬುವವರು 2015 ರ ಮೇ.19 ರಂದು ಹಾಪಕಾಮ್ಸ್‌ನಿಂದ ತರಕಾರಿ ತೆಗೆದುಕೊಂಡಿ ಮನೆಗೆ ತೆರಳುವ ವೇಳೆಯಲ್ಲಿ ಆರೋಪಿಗಳಾದ ಗಂಗಾಧರ್ ಹಾಗೂ ಸಂತೋಷ್ ದ್ವಿಚಕ್ರ ವಾಹನದಲ್ಲಿ ಬಂದು ಸುಮಾರು 20 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಅಪಹರಿಸಿದ್ದರು. ಈ ಸಂಬಂಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್ ತನಿಖೆ ಪೂರೈಸಿ ನ್ಯಾಯಾಲಕ್ಕೆ ದೋಷಾರೋಪಣೆ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಆರೋಪ ಗಂಗಾಧರ್ ವಿಚಾರಣೆ ಹಂತದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಪ್ರಕರಣವನ್ನು ಪ್ರತ್ಯೇಕಿಸಿ ಆರೋಪಿ ಸಂತೋಷ್ ವಿರುದ್ಧ ವಿಚಾರಣೆ ನಡೆಸಿದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಎಸ್.ಹೊನ್ನಸ್ವಾಮಿ ಆರೋಪಿಗೆ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ.ಮಹೇಶ್ ವಿಚಾರಣೆ ನಡೆಸಿ ವಾದಮಂಡಿಸಿದ್ದರು.