ಚಾಮರಾಜನಗರ: ಜಿಲ್ಲಾ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ವಿರುದ್ಧ ಎಸ್ಸಿ/ಎಸ್ಟಿ ಮೊಕದ್ದಮೆ ದಾಖಲು ಮಾಡುವುದಾಗಿ ಧಮಕಿ ಹಾಕಿದ್ದಾರೆ ಎಂಬ ಅಯ್ಯನಪುರ ಶಿವಕುಮಾರ್ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ದಲಿತ ಮುಖಂಡ ಸಿ.ಕೆ.ಮಂಜುನಾಥ್ ಹೇಳಿದರು.
ಜಿಲ್ಲಾ ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ತಾಲೂಕು ಆದಿ ಕರ್ನಾಟಕ ಅಭಿವೃದ್ಧಿ ಸಂಘದ ಆಸ್ತಿ ವಿಚಾರವಾಗಿ ಸಿದ್ದಯ್ಯನಪುರ ಗ್ರಾಮದ ಎಸ್.ಪಿ.ಮಹೇಶ್ ಅವರು ಪ್ರಶ್ನೆ ಮಾಡುತ್ತಿದ್ದ ಸಂದರ್ಭದಲ್ಲಿ ನಾನು ಮಾತನಾಡಿ, ಸಮುದಾಯದ ಆಸ್ತಿ ವಿಚಾರ ಗಡಿ,ಕಟ್ಟೆ ಮನೆಗಳ ಯಜಮಾನರ ಮುಂದಿದೆ. ಅವರು ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಂಬಿಕೆ ಇದೆ. ಈ ಕುರಿತು ಜಿಲ್ಲಾಡಳಿತ ಒಂದು ಅವಕಾಶವನ್ನು ಮಾಡಿಕೊಡಬೇಕು ಎಂದು ಮನವಿ ಮಾಡಿದ್ದೇವೆ ಹೊರತು ಯಾವ ಅಧಿಕಾರಿಗಳಿಗೂ ಧಮಕಿ ಹಾಕಿಲ್ಲ ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಅಯ್ಯನಪುರ ಶಿವಕುಮಾರ್ ಅವರು ಆರೋಪ ಮಾಡುವ ರೀತಿಯಲ್ಲಿ ನಾವು ಸಭೆಯಲ್ಲಿ ನಡೆದುಕೊಂಡಿಲ್ಲ. ಸಮುದಾಯದ ಆಸ್ತಿ ವಿಚಾರವನ್ನು ಕಾನೂನು ವ್ಯಾಪ್ತಿಯಲ್ಲಿ ಚರ್ಚಿಸಿದ್ದೇವೆ. ಅಯ್ಯನಪುರ ಶಿವಕುಮಾರ್ ಅವರು ಸುಳ್ಳು ಸುದ್ದಿಗಳನ್ನು ಹಬ್ಬಿಸುವುದನ್ನು ಬಿಡಬೇಕು. ಸಮಾಜದ ಆಸ್ತಿ ಉಳಿಯಬೇಕು ಹಾಗೇ ಆದಿ ಕರ್ನಾಟಕ ಅಭಿವೃದ್ಧಿ ಸಂಘವು ಸ್ಥಿರವಾಗಿ ಇರಬೇಕು ಎನ್ನುವ ಉದ್ದೇಶದಿಂದ ನಾವು ಪ್ರಯತ್ನ ಮಾಡುತ್ತಿದ್ದೇವೆ. ಸೌಹಾರ್ದ ಸಮಿತಿ ಸಭೆಯನ್ನು ಆಯೋಜನೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ ಎಂದರು.
ಗೋಷ್ಠಿಯಲ್ಲಿ ಛಲವಾದಿ ಮಹಾಸಭಾದ ಸೋಮಸುಂದರ್, ಕೊಡಸೋಗೆ ಪ್ರಸಾದ್, ಶಿವಣ್ಣ, ಕೃಷ್ಣಮೂರ್ತಿ ಹಾಜರಿದ್ದರು.