ಜಿಲ್ಲೆ

ಏಕರೂಪ ತಂತ್ರಾಂಶ ಗೊಂದಲದಿಂದ ನೌಕರರಿಗೆ ಸಮಸ್ಯೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಕರ್ನಾಟಕ ಹಾಲು ಮಹಾಮಂಡಳಿ ವತಿಯಿಂದ ಅಳವಡಿಸಿರುವ ಏಕರೂಪ ತಂತ್ರಾಂಶ ಗೊಂದಲದಿಂದ ಕೂಡಿದ್ದು, ನೌಕರರಿಗೆ ಸಮಸ್ಯೆ ಎದುರಾಗಿದೆ ಎಂದು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎನ್.ಪಿ.ಶಾಂತು ದೂರಿದರು.

ಏಕರೂಪ ತಂತ್ರಾಂಶವನ್ನು ಒಕ್ಕೂಟಗಳು ಮತ್ತು ಕೆಎಂಎಫ್ ತಮ್ಮ ಇಲಾಖೆಯಿಂದ ಅಭಿವೃದ್ಧಿಪಡಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅಳವಡಿಸಲು ಕ್ರಮಕೈಗೊಳ್ಳಬೇಕಾಗಿತ್ತು. ಏಕರೂಪ ತಂತ್ರಾಂಶ ಅಳವಡಿಕೆಯಿಂದ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೂ ಮತ್ತು ಉತ್ಪಾದಕರಿಗೂ ಹಾಲು ಶೇಖರಣೆ ಸಮಯದಲ್ಲಿ ಗಲಾಟೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಒಕ್ಕೂಟದಿಂದಲೇ ಇದನ್ನು ಅಳವಡಿಸಿ, ನೌಕರರಿಗೆ ಸೂಕ್ತ ತರಬೇತಿಯನ್ನು ನೀಡಬೇಕು ಎಂದು ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರು ಸರ್ಕಾರದ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಅವರನ್ನು ಸರ್ಕಾರಿ ಅಥವಾ ಒಕ್ಕೂಟದ ನೌಕರರು ಎಂದು ಪರಿಗಣಿಸಬೇಕು. ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 40 ರೂ, ನಿಗದಿ ಮಾಡಬೇಕು. ಹಾಲಿನ ಪ್ರೋತ್ಸಾಹ ಧನವನ್ನು 10 ರೂ, ಗೆ ಏರಿಕೆ ಮಾಡಬೇಕು. ಜಾನುವಾರುಗಳಿಗೆ ನೀಡುವ ಸೀಡ್ಸ್ ದರವನ್ನು ಕಡಿಮೆ ಮಾಡಬೇಕು. ನೌಕರರಿಗೆ ಒಕ್ಕೂಟದ ವತಿಯಿಂದ ಪ್ರೋತ್ಸಾಹ ಧನ ನೀಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್, ಮುಖ್ಯ ಕಾರ್ಯನಿರ್ವಾಹಕ ಎಂ.ಮಹದೇವಶೆಟ್ಟಿ, ಶಿವಣ್ಣ, ಕೆ.ಎಸ್.ನಟರಾಜ್, ಎಂ.ಬಸವಣ್ಣ, ವೃಷಭೆಂದ್ರ ಹಾಜರಿದ್ದರು.