ಚಾಮರಾಜನಗರ : ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ಹನೂರು ಚನ್ನಪ್ಪ ಅವರ ಕಥೆ ಆಧಾರಿತ ‘ಅನ್ನ’ ಸಿನಿಮಾ ಸುಚಿತ್ರ ಫಿಲಂ ಸೊಸೈಟಿಯ ಚಿತ್ರಭಾರತಿ ಚಲನಚಿತ್ರೋತ್ಸವದಲ್ಲಿ ಜು.19 ರ ಸಂಜೆ 6.30ಕ್ಕೆ ಪ್ರದರ್ಶನವಾಗುತ್ತಿದೆ.
ಚಾಮರಾಜನಗರ ಭಾಷಾ ಸೊಗಡನ್ನು ಒಳಗೊಂಡಿರುವ ‘ಅನ್ನ’ ಸಿನಿಮಾ ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ 14ನೇ ಚಲನಚಿತ್ರೋತ್ಸವದಲ್ಲಿ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ಈಗಾಗಲೇ ಪ್ರದರ್ಶಿತವಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರವನ್ನು ಎಸ್.ಬಸವರಾಜು ನಿರ್ಮಾಣ ಮಾಡಿದ್ದು, ಎನ್.ಎಸ್.ಇಸ್ಲಾಹುದ್ದೀನ್ ನಿರ್ದೇಶನ, ಮಧು ಸಗತ ಛಾಯಾಗ್ರಹಣ, ಟಿ.ಗುರುಸ್ವಾಮಿ ಸಂಕಲನ, ಎನ್.ಮಹೇಶ್ವರ ಕಲಾ ನಿರ್ದೇಶನ, ಬಿ.ಎನ್.ಸಿದ್ದು ಪ್ರಸನ್ನ ಸಂಭಾಷಣೆ ಇದ್ದು, ನಾಗೇಶ್ ಕಂದೇಗಾಲ ಸಂಗೀತ ನೀಡಿದ್ದಾರೆ.
ಜಿ.ಎನ್.ನಂದನ್, ಪದ್ಮಶ್ರೀ, ಸಿ.ಆರ್.ಡಾ.ಭುವನ, ಸಂಪತ್ ಮೈತ್ರೇಯ, ಬಲ ರಾಜವಾಡಿ, ರಮೇಶ್ ಸಿದ್ದಯ್ಯನಪುರ, ನಾಗಶ್ರೀ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.