ಜಿಲ್ಲೆ

ಶಾಂತಿ, ಸೌಹಾರ್ದತೆಯಿಂದ ಗಣೇಶ ಪ್ರತಿಷ್ಠಾಪನೆ

ಎ.ಎಸ್.ಮಣಿಕಂಠ

ಚಾಮರಾಜನಗರ: ಶ್ರೀವಿದ್ಯಾ ಗಣಪತಿ ಮಂಡಳಿಯಿಂದ ಗೌರಿ-ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾಗುವ ಗಣೇಶಮೂರ್ತಿ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶ್ರೀ ವಿದ್ಯಾಗಣಪತಿ ಮಂಡಳಿ ಪದಾಧಿಕಾರಿಗಳು ಹಾಗೂ ವಿವಿಧ ಕೋಮಿನ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮಂಡಳಿಯ ಪದಾಧಿಕಾರಿಗಳು, ಮುಖಂಡರು ಹಲವಾರು ಸಲಹೆ, ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಶ್ರೀವಿದ್ಯಾಗಣಪತಿ ವಿದ್ಯಾಮಂಡಳಿ ಪದಾಧಿಕಾರಿ ಬಾಲಸುಬ್ರಮಣ್ಯಂ ಮಾತನಾಡಿ, ನಗರದಲ್ಲಿ ಪ್ರತಿಷ್ಠಾಪಿಸಲಾಗುವ ಇತಿಹಾಸ ಪ್ರಸಿದ್ಧ ವಿದ್ಯಾಗಣಪತಿಯ 61ನೇ ಪೂಜಾ ಮಹೋತ್ಸವ ನಡೆಯಲಿದೆ. 7 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾಗಣಪತಿಯ ಪೂಜಾ ಮಹೋತ್ಸವಕ್ಕಾಗಿ ಪ್ರತಿಬಾರಿಯಂತೆ ಈ ಬಾರಿಯೂ ಸಹ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಎಲ್ಲರ ಸಹಕಾರವು ಅಗತ್ಯವಾಗಿದೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಸಾಂಪ್ರಾದಾಯಿಕವಾಗಿ ಗಣಪತಿ ಹಬ್ಬ ಬೇರೆಲ್ಲಾ ಹಬ್ಬಗಳಿಗಿಂತ ದೊಡ್ಡ ಹಬ್ಬವಾಗಿದ್ದು, ಎಲ್ಲರು ಸೇರಿ ಸಂತೋಷ, ಸಂಭ್ರಮ ಹಾಗೂ ಭಕ್ತಿಪೂರ್ವಕವಾಗಿ ಆಚರಿಸುವ ಹಬ್ಬವಾಗಿದೆ. ಕಳೆದ ಬಾರಿ ಗಣಪತಿ ಪ್ರತಿಷ್ಠಾಪಿಸಿ ಯಾವುದೇ ತೊಂದರೆಯಾಗದಂತೆ ಸುಗಮವಾಗಿ ಹಬ್ಬ ಆಚರಿಸಲಾಗಿತ್ತು. ಅಲ್ಲದೆ ಈ ಬಾರಿ ಸರ್ಕಾರದ ನಿರ್ದೇಶನದನ್ವಯ ಪಿ.ಒ.ಪಿ ಗಣೇಶಮೂರ್ತಿ ಬಳಸಲು ಅವಕಾಶವಿಲ್ಲ. ಪರಿಸರಕ್ಕೆ ಪೂರಕವಾಗಿರುವ ಜೇಡಿಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನೆ ಪ್ರತಿಷ್ಠಾಪಿಸಬೇಕಾಗಿದೆ ಎಂದರು.

ಗಣಪತಿ ಪ್ರತಿಷ್ಠಾಪನೆ, ಕಾರ್ಯಕ್ರಮಗಳ ಆಯೋಜನೆ ಮಾಡುವ ಆಯೋಜಕರು ಆಯಾ ತಾಲೂಕು ವ್ಯಾಪ್ತಿಯಲ್ಲಿ ತಾಲೂಕು ಕಚೇರಿ ಅಥವಾ ಪೊಲೀಸ್ ಠಾಣೆಯಲ್ಲಿ ನಿಗದಿತ ನಮೂನೆಯನ್ನು ಪಡೆದು ಸದರಿ ಸಮಿತಿಯಿಂದ ಅನುಮತಿ ಪಡೆಯಬೇಕು. ಪ್ರತಿಷ್ಠಾಪನೆಗಾಗಿ ಅರ್ಜಿ ಹಾಕಿದ ಒಂದೆರಡು ದಿನದೊಳಗೆ ಅನುಮತಿ ನೀಡಲಾಗುತ್ತದೆ. ಅಲ್ಲದೆ ಗಣಪತಿ ವಿಸರ್ಜನೆ ದಿನದಂದು ಮೆರವಣಿಗೆ ಮಾರ್ಗದಲ್ಲಿ ಸ್ವಚ್ಚತೆ, ದೀಪಾಲಂಕಾರ ಸೇರಿದಂತೆ ಎಲ್ಲಾ ವ್ಯವಸ್ಥೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸ್, ನಗರಸಭೆ, ಚೆಸ್ಕಾಂ, ಅಗ್ನಿಶಾಮಕ ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಪೂರ್ವಸಿದ್ದತೆಗಳನ್ನು ಖಚಿತಪಡಿಸಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಮಾತನಾಡಿ, ಪಟ್ಟಣದಲ್ಲಿ ಗಣೇಶ ಪೂಜಾ ಮಹೋತ್ಸವವನ್ನು ಕಳೆದ ಬಾರಿಯಂತೆ ಈ ಬಾರಿಯು ಆಚರಿಸಲು ಎಲ್ಲರ ಸಹಕಾರ ಅವಶ್ಯವಾಗಿದೆ. ಪ್ರತಿದಿನ ಕಾರ್ಯಕ್ರಮ ರಾತ್ರಿ 10 ಗಂಟೆಯೊಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ನಗರಸಭೆ ಸದಸ್ಯ ಅಬ್ರಾರ್ ಅಹಮದ್, ಖಲೀಲ್ ಉಲ್ಲಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಶೀಲ್ದಾರ್ ಗಿರಿಜಾ ಹಾಗೂ ಇತರರು ಹಾಜರಿದ್ದರು.