ಚಾಮರಾಜನಗರ: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಪರಂಪರೆ ಮತ್ತು ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರ ಸೇವೆ ಅಪಾರ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಪಿಡಬ್ಲ್ಯೂಡಿ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಆಲೂರು ವೆಂಕಟರಾಯರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶ್ರೇಷ್ಠ ವಿದ್ವಾಂಸರು ಹಾಗೂ ವಕೀಲರು ಆಗಿದ್ದ ಆಲೂರು ವೆಂಕಟರಾಯರಿಗೆ ಭಾರತೀಯ ಸಂಸ್ಕೃತಿ ಮತ್ತು ಕನ್ನಡದ ಸಂಸ್ಕೃತಿಯ ಬಗ್ಗೆ ಅಪಾರ ಜ್ಞಾನವಿತ್ತು. ವಿವೇಕಾನಂದರು, ಬಾಲ ಗಂಗಾಧರ ತಿಲಕ್ ಮತ್ತು ಅರವಿಂದರ ವಿಶೇಷ ಪ್ರಭಾವವನ್ನು ಅವರಲ್ಲಿ ಕಾಣಬಹುದು. 35ಕ್ಕೂ ಹೆಚ್ಚು ಕೃತಿಗಳನ್ನು ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಪರಂಪರೆ ಉಳಿವಿಗಾಗಿ ದೂರದೃಷ್ಟಿಯ ಸಂಸ್ಥೆಯನ್ನು ಸ್ಥಾಪಿಸಿದ ಸರ್ ಎಂ.ವಿಶ್ವೇಶ್ವರಯ್ಯನವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಆರ್.ವಿ.ಮಹದೇವಪ್ಪ ಮಾತನಾಡಿ, ಉತ್ತಮ ಪರಿಸರದಲ್ಲಿರುವ ಪಿಡಬ್ಲ್ಯೂಡಿ ಶಾಲೆ ನಗರದ ಮಾದರಿ ಶಾಲೆಯಾಗಲಿ. ಕನ್ನಡದ ಅಭಿಮಾನವನ್ನು ಬೆಳೆಸಿಕೊಳ್ಳುವ ದಿಕ್ಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಿಗೆ ಸರ್ವರ ಸಹಕಾರ ಅಗತ್ಯವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಮಾಲಿನಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿ.ಕೆ.ಆರಾಧ್ಯ ,ಸರಸ್ವತಿ, ನಾಗಮ್ಮ, ರೂಪ, ಸವಿತಾ, ಸುಗಂಧಿನಿ, ಕಮಲ, ಮಮತಾ, ಭಾಸ್ಕರ್, ಮಣಿಕಂಠ ಉಪಸ್ಥಿತರಿದ್ದರು.