ಜಿಲ್ಲೆ

ದಲಿತ ನೌಕರರಿಗೆ ನ್ಯಾಯಕೊಡಿಸಿ

ಎ.ಎಸ್.ಮಣಿಕಂಠ

ಚಾಮರಾಜನಗರ: ಚಾ.ನಗರ ವೈದ್ಯಕೀಯ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ಗುತ್ತಿಗೆ ನೌಕರರನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದುಹಾಕಿದ್ದು, ಅವರಿಗೇ ನ್ಯಾಯ ದೊರಕಿಸಿಕೊಡಬೇಕು ಎಂದು ದಲಿತ ಮುಖಂಡರು ಆಗ್ರಹಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡ ಬ್ಯಾಡಮೂಡ್ಲು ಬಸವಣ್ಣ ಮಾತನಾಡಿ, ಸಿಮ್ಸ್ ಆಸ್ಪತ್ರೆಯಲ್ಲಿ ಈ ಹಿಂದೆಯೂ ದಲಿತ ನೌಕರರ ಮೇಲೆ ಉದ್ದೇಶಪೂರ್ವಕವಾಗಿ ದೌರ್ಜನ್ಯ ನಡೆಸಲಾಗುತ್ತಿತ್ತು. ಅದು ಈಗಲೂ ಮುಂದುವರಿದಿದ್ದು, ಸಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಲಿತ ಗುತ್ತಿಗೆ ನೌಕರರನ್ನು ಉದ್ದೇಶಪೂರ್ವಕವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ. ಈ ನಿಟ್ಟಿನಲ್ಲಿ ಸಿಮ್ಸ್ ಆಡಳಿತ ಮಂಡಳಿ ಜತೆಗೆ ಪೊಲೀಸ್ ಇಲಾಖೆಯ ವತಿಯಿಂದ ಸಭೆ ನಡೆಸಿ ಗುತ್ತಿಗೆ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.

ದಲಿತ ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವ ವಿಚಾರಗಳು ಕೇಳಿಬಂದಾಗ ದಲಿತರು ಭಾವನಾತ್ಮಕವಾಗಿ ಉದ್ರೇಕದಿಂದ ವರ್ತನೆ ಮಾಡುತ್ತಾರೆ. ಸಿಮ್ಸ್‌ನಲ್ಲಿ ಪ್ರಕರಣದಲ್ಲಿ ಹಲವರ ಮೇಲೆ ದೂರು ದಾಖಲಾಗಿದ್ದು, ಅವರನ್ನು ಕೈಬಿಡಬೇಕು. ಅದರಂತೆ ಹೊಂಗನೂರು ಪ್ರಕರಣದಲ್ಲೂ ಹಲವಾರು ಅಮಾಯಕ ಯುವಕರ ಮೇಲೆ ದೂರು ದಾಖಲಾಗಿದ್ದು, ಅವರ ಹೆಸರನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಸಿಮ್ಸ್ ಗುತ್ತಿಗೆ ನೌಕರರೊಬ್ಬರು ಮಾತನಾಡಿ, ದಲಿತರು ಎಂಬ ಕಾರಣಕ್ಕೆ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಹಲವರ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣ ದಾಖಲಾಗಿದೆ. 9 ಜನರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ದೊರಕಿದೆ. ಕೆಲವರು ಹೈಕೋರ್ಟ್‌ನಲ್ಲಿ ಜಾಮೀನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದೇವೆ. ಸುಮಾರು 10 ತಿಂಗಳಿಂದ ಕೆಲಸವಿಲ್ಲದೇ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಸಿಮ್ಸ್ ಆಸ್ಪತ್ರೆಯ ಗುತ್ತಿಗೆ ನೌಕರರ ಸಮಸ್ಯೆ ಕುರಿತು ಶೀಘ್ರದಲ್ಲೇ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಡಿವೈಎಸ್ಪಿ ಲಕ್ಷ್ಮಯ್ಯ, ಧರ್ಮೇಂದ್ರ ಹಾಗೂ ದಲಿತ ಮುಖಂಡರು ಹಾಜರಿದ್ದರು.

ಕಣ್ಣೀರು ಹಾಕಿದ ದಂಪತಿ:
ಮಲೆ ಮಹದೇಶ್ವರ ಬೆಟ್ಟದ ನಿವಾಸಿ ರತ್ನಾಬಾಯಿ ಮಾತನಾಡಿ, ನಾವು ಸರ್ವೇ ನಂ.59 ರಲ್ಲಿ ವ್ಯವಸಾಯ ಮಾಡಿಕೊಂಡು ಬರುತ್ತಿದ್ದೇವೆ. ಕೊಲತ್ತೂರು ಮಣಿ ಎಂಬುವವರು ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ತಂದಿದ್ದೇನೆ ಎಂದ ನಮ್ಮ ವಾಸದ ಮನೆಯನ್ನು ಹೊಡೆದು ಹಾಕಿದ್ದಾರೆ. ನಿರಂತರವಾಗಿ ಅವರ ಮಕ್ಕಳು ಕಿರುಕುಳ ನೀಡುತ್ತಿದ್ದಾರೆ. ನಮಗೆ ಜೀವನ ನಡೆಸಲು ಭಯವಾಗುತ್ತಿದೆ ಎಂದು ಕಣ್ಣೀರು ಸುರಿಸಿದರು. ಎಸ್ಪಿ ಡಾ.ಬಿ.ಟಿ.ಕವಿತಾ ಪ್ರತಿಕ್ರಿಯಿಸಿ, ಈಗಾಗಲೇ ಕೊಲತ್ತೂರು ಮಣಿ ಮೇಲೆ ದೂರು ದಾಖಲಾಗಿದ್ದು, ಆತ ದೌರ್ಜನ್ಯ ಮುಂದುವರಿಸಿದರೇ ರೌಡಿ ಶೀಟರ್ ತೆರೆಯಲಾಗುತ್ತದೆ ಎಂದು ಹೇಳಿದರು.

ಹಲವು ಸಮಸ್ಯೆಗಳ ಚರ್ಚೆ:
ಹನೂರು ತಾಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ದಲಿತ ಸಮುದಾಯದವಳು ಎನ್ನುವ ಕಾರಣಕ್ಕೆ ಬಿಸಿಯೂಟದ ಕೆಲಸಕ್ಕೆ ಅರ್ಜಿಹಾಕಿಸಿಕೊಂಡಿಲ್ಲ ಎಂದು ದಲಿತ ಮುಖಂಡ ದೊಡ್ಡಿಂದವಾಡಿ ಸಿದ್ದರಾಜು ಆರೋಪಿಸಿದರು. ದಲಿತರ ಬಡಾವಣೆಗಳಲ್ಲಿ ಅಕ್ರವಾಗಿ ಮದ್ಯಮಾರಾಟವಾಗುತ್ತಿದ್ದು, ಬಾರ್ ಮಾಲೀಕರ ಮೇಲೆ ದೂರು ದಾಖಲು ಮಾಡುತ್ತಿಲ್ಲ ಎಂದು ಹಲವು ಮುಖಂಡರು ಕಿಡಿಕಾರಿದರು. ಈ ವೇಳೆ ಎಸ್ಪಿ ಕವಿತಾ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸುಮಾರು 12 ಬಾರ್ ಮಾಲೀಕರ ಮೇಲೆ ದೂರು ದಾಖಲಾಗಿದೆ. ಅಕ್ರಮ ಮದ್ಯಮಾರಾಟದ ಕುರಿತು ಕಠಿಣ ಕ್ರಮವಹಿಸಲಾಗಿದೆ ಎಂದರು. ಉಮ್ಮತ್ತೂರು ಗ್ರಾಮದ ದಿಲೀಪ್ ಎಂಬುವವರು ಕುದೇರು ಪೊಲೀಸ್ ಠಾಣೆಯ ಮುಖ್ಯಪೇದೆ ಸತೀಶ್ ಎಂಬುವವರು ಉದ್ದೇಶಪೂರ್ವಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಮನವಿ ಸಲ್ಲಿಸಿದರು.

ಠಾಣೆಗಳಲ್ಲಿ ಸಂವಿಧಾನ ಪೀಠಿಕೆ:
ಈ ಹಿಂದಿನ ಸಭೆಯಲ್ಲಿ ದಲಿತ ಮುಖಂಡ ಆಲೂರು ನಾಗೇಂದ್ರ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ರಾಷ್ಟ್ರ ನಾಯಕರ ಭಾವಚಿತ್ರ ಹಾಗೂ ಸಂವಿಧಾನ ಪೀಠಿಕೆಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದರು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಅವರು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಅಳವಡಿಸಲಿರುವ ಸಂವಿಧಾನ ಪೀಠಿಕೆ ಚಿತ್ರವನ್ನು ಪ್ರದರ್ಶನ ಮಾಡಿದರು. ಈ ವೇಳೆ ದಲಿತ ಮುಖಂಡರು ಚೆಪ್ಪಾಳೆ ತಟ್ಟುವ ಮೂಲಕ ಹರ್ಷ ವ್ಯಕ್ತಪಡಿಸಿದರು.